ಕಂಪ್ಲಿ: ಎಲ್.ಎಲ್.ಸಿಗೆ ಬೇಸಿಗೆ ಬೆಳೆಗೆ ನೀರು ಒದಗಿಸಲು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಪದಾಧಿಕಾರಿಗಳು ಮುನಿರಾಬಾದ್‌ನ ತುಂಗಭದ್ರಾ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಲಕ್ಷ್ಮಣ ನಾಯಕಗೆ ಗುರುವಾರ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಮಾತನಾಡಿ, 2025ರ ಜೂ.27ರಂದು ಬೆಂಗಳೂರಿನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ತುಂಗಭದ್ರಾ ಜಲಾಶಯದ ಗೇಟ್ ದುರಸ್ತಿ, ಬೇಸಿಗೆ ಬೆಳೆಗೆ ನೀರೊದಗಿಸುವ ವಿಷಯ ಚರ್ಚಿಸುವುದಾಗಿ ತೀರ್ಮಾನಿಸಲಾಗಿತ್ತು. ಆದರೆ, ಈತನಕ ಸಭೆ ಕರೆದಿಲ್ಲ. ಕೂಡಲೇ ಮುನಿರಾಬಾದ್‌ನಲ್ಲಿಯೇ ಐಸಿಸಿ ಸಭೆ ಕರೆಯಬೇಕು. ಸಭೆಯಲ್ಲಿ ಎಲ್ಲ ರೈತ ಮುಖಂಡರಿಗೆ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಜಲಾಶಯದಲ್ಲಿ ಪ್ರಸ್ತುತ 80 ಟಿಎಂಸಿ ನೀರು ಸಂಗ್ರಹವಿದೆ. ಜಲಾಶಯದ ಗೇಟುಗಳ ದುರಸ್ತಿ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಬೇಕು. ಗೇಟ್‌ಗಳ ದುರಸ್ತಿ ಕುರಿತ ತಜ್ಞರು, ಅಧಿಕಾರಿಗಳು ನೀಡಿದ ವರದಿಯನ್ನು ಯಥಾವತ್ತಾಗಿ ಬಹಿರಂಗಗೊಳಿಸಬೇಕು. ಜಲಾಶಯದಲ್ಲಿ ಸಂಗ್ರಹವಾದ 33 ಟಿಎಂಸಿಯಷ್ಟು ಹೂಳು ತೆಗೆಯುವ ಕ್ರಮ ಕೈಗೊಳ್ಳಬೇಕು. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯದಲ್ಲದವರನ್ನು ಟಿ.ಬಿ.ಬೋರ್ಡ್‌ಗೆ ಕಾರ್ಯದರ್ಶಿಯನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಾರ್ಯಾಧ್ಯಕ್ಷರಾದ ಕೆ.ರಮೇಶ್, ಡಿ.ಮುರಾರಿ, ನಗರ ಅಧ್ಯಕ್ಷ ತಿಮ್ಮಪ್ಪನಾಯಕ, ಪದಾಧಿಕಾರಿಗಳಾದ ಟಿ.ಗಂಗಣ್ಣ, ಕೆ.ಮಂಜು, ವಿ.ಟಿ ರಾಜು, ಉಲ್ಲೇಶ್, ಆರ್.ಆರ್.ತಾಯಪ್ಪ, ಕಾಕುಬಾಳು ಎಂ.ಜಡೆಪ್ಪ ಇತರರಿದ್ದರು.