ಜಿಲ್ಲೆ

ಮದುವೆಗೆ ಪಡೆದಿದ್ದ ಪರವಾನಗಿ ರದ್ದು: ಸಿದ್ಧತೆ ನಡೆಸಿದ್ದ ವಧು-ವರ ಕುಟುಂಬ ಸದಸ್ಯರಿಗೆ ಬೇಸರ

ಕಂಪ್ಲಿ: ಮೇ 24ರವರೆಗೆ ನಿಗದಿಯಾಗಿದ್ದ ಎಲ್ಲ ಮದುವೆಗಳಿಗೆ ನೀಡಿದ್ದ ಪರವಾನಗಿಯನ್ನು ತಹಸೀಲ್ದಾರ್ ಗೌಸಿಯಾಬೇಗಂ ರದ್ದುಪಡಿಸಿದ್ದಾರೆ. ಇದರಿಂದ ನೂತನ ವಧು ವರರಿಗೆ ಮುಹೂರ್ತವಿದ್ದರೂ ಕಂಕಣಭಾಗ್ಯ ಕೂಡಿ ಬಾರದಂತಾಗಿದೆ.

ಮೇ 15ರತನಕ ತಾಲೂಕಾದ್ಯಂತ ನಡೆಯಬೇಕಿದ್ದ 23 ಮದುವೆಗಳಿಗೆ ಪರವಾನಗಿ ನೀಡಲಾಗಿತ್ತು. ಆದರೆ, ಕರೊನಾ ಲಾಕ್‌ಡೌನ್ ಕಾರಣ ಮೇ 10ರಂದು ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿ ಮೇ 24ರತನಕ ಯಾವುದೇ ಮದುವೆ ಸಮಾರಂಭ ನಡೆಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದರಿಂದ, ಮದುವೆಗೆ ಎಲ್ಲ ಸಿದ್ಧತೆ ನಡೆಸಿದ್ದ ವಧು-ವರ ಕುಟುಂಬದವರಿಗೆ ಬೇಸರ ಮೂಡಿಸಿದೆ. ಮದುವೆ ಹೇಗೆ ಮಾಡಬೇಕು ಎಂದು ಚಿಂತೆಗೀಡಾಗಿದ್ದಾರೆ. ಕರೊನಾ ಸೋಂಕನ್ನು ತಡೆಯಲು ಜಿಲ್ಲಾಡಳಿತ ಮದುವೆ ಸಮಾರಂಭಗಳನ್ನು ರದ್ದುಗೊಳಿಸಿದ್ದು, ತಾಲೂಕಿನ ಜನರು ಗೌರವಿಸಬೇಕು. ಯಾವುದೇ ಕಾರಣಕ್ಕೂ ಮುಂದಿನ ಆದೇಶದವರೆಗೆ ಮದುವೆ ಸಮಾರಂಭ ಮಾಡಬಾರದು ಎಂದು ತಹಸೀಲ್ದಾರ್ ಗೌಸಿಯಾಬೇಗಂ ತಿಳಿಸಿದ್ದಾರೆ.