ಕಂಪ್ಲಿ: ಅಜ್ಞಾನವೆಂಬ ಕತ್ತಲನ್ನು ದೂರ ಮಾಡಿ ಸುಜ್ಞಾನದ ಬೆಳಕು ಕಾಣುವುದೇ ಮಹಾಶಿವರಾತ್ರಿಯ ಉದ್ದೇಶ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಸಕಲೇಶ್ವರಿ ಅಕ್ಕ ಹೇಳಿದರು.
ಪಟ್ಟಣದಲ್ಲಿ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಶಿವಧ್ವಜಾರೋಹಣಗೈದು, ಶಿವರಥ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಭಾರತವನ್ನು ವಿಶ್ವಗುರು ರಾಷ್ಟ್ರವನ್ನಾಗಿಸಲು ಅಧ್ಯಾತ್ಮ ಶಕ್ತಿಯಿಂದ ಮಾತ್ರ ಸಾಧ್ಯ. ಈ ಶಕ್ತಿ ಜೀವನದಲ್ಲಿ ಸದಾ ಜಾಗೃತವಾಗಿರಲು, ಜೀವನ ಮೌಲ್ಯಗಳನ್ನು ಸಾಕಾರಗೊಳಿಸಬೇಕಿದೆ. ಶಿವನನ್ನು ಅರಿತು ಧ್ಯಾನಿಸಲು ದುಸ್ಸಂಗ, ದುಶ್ಚಟ, ದುರ್ಗುಣ, ದುರಾಭ್ಯಾಸಗಳಿಂದ ವಿಮುಖರಾಗಬೇಕು ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವರಥ ಯಾತ್ರೆ ನಡೆಯಿತು. ಓಂ ಶಾಂತಿಯಲ್ಲಿ ಧ್ವನಿ ಮತ್ತು ಬೆಳಕಿನ ಚೈತನ್ಯ ದೃಶ್ಯ ಮಂಟಪದಲ್ಲಿ ಶಿವದರ್ಶನ, ಭಾವೈಕ್ಯ ಸಾರುವ ಜ್ಞಾನನೃತ್ಯ ಪ್ರದರ್ಶನ ಮೊದಲಾದ ಕಾರ್ಯಕ್ರಮಗಳು ನಡೆದವು. ಪ್ರಮುಖರಾದ ವೆಂಕಟಸ್ವಾಮಿರೆಡ್ಡಿ, ರವಿಗೌಡ, ಅಚ್ಚಪ್ಪ ಶರಣಪ್ಪ, ರಾಮಣ್ಣ, ಸರಸ್ವತಿ ಜೆಪಿ ಶಾಸ್ತ್ರಿ, ಪಾರ್ವತಿ ರೆಡ್ಡಿ, ಬಿ.ಎಂ.ಪುಷ್ಪ ರುದ್ರಯ್ಯ ಇತರರಿದ್ದರು.
ತಾಲೂಕಿನಾದ್ಯಂತ ಮಹಾಶಿವರಾತ್ರಿಯನ್ನು ಬುಧವಾರ ಶ್ರದ್ಧೆ-ಭಕ್ತಿಯಿಂದ ಆಚರಿಸಲಾಯಿತು. ಕೋಟೆಯ ತುಂಗಭದ್ರಾ ನದಿಯಲ್ಲಿ ಕೆಲವರು ಪುಣ್ಯಸ್ನಾನ ಮಾಡಿದರು. ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ಕೋಟೆಯ ಐತಿಹಾಸಿಕ ಪಂಪಾಪತಿ, ಜಡೇಶಂಕರಲಿಂಗ, ಭಾರತ ಟಾಕೀಸ್ ಬಳಿಯ ರಾಮಲಿಂಗ, ನಗರೇಶ್ವರ, ನೀಲಕಂಠೇಶ್ವರ, ಮಡ್ಡಿಕಟ್ಟೆಯ ಉಳ್ಳಿ ಬಸಪ್ಪ, ದೇವಾಂಗಪೇಟೆಯ ರಾಮಲಿಂಗ ಚೌಡೇಶ್ವರಿ, ಎಸ್.ಎನ್.ಪೇಟೆಯ ಮಲ್ಲಿಕಾರ್ಜುನ, ಅದ್ದಪ್ಪ ಬೀರಪ್ಪ, ಫ್ಯಾಕ್ಟ್ರಿ ಮುಕ್ತಿನಾಥೇಶ್ವರ ಶಿವನ ಮಂದಿರಗಳಲ್ಲಿ ವಿಶೇಷ ರುದ್ರಾಭಿಷೇಕ, ನಾನಾ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಿವನ ದೇವಸ್ಥಾನಗಳಲ್ಲಿ ಉತ್ತರಾಣಿಕಡ್ಡಿ ಬತ್ತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದರು. ಶಿವನ ದೇವಸ್ಥಾನಗಳನ್ನು ವಿದ್ಯುತ್‌ದೀಪ, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನಗಳಲ್ಲಿ ಬುಧವಾರ ರಾತ್ರಿ ಅಖಂಡ ಶಿವಭಜನೆ, ಶಿವಸಂಕೀರ್ತನೆ ಜರುಗಿತು.
ಶಿವಪೂಜೆಗೆ ಆಕಳ ಹಾಲು ಶ್ರೇಷ್ಠವೆಂದು ಜಾಗೃತಿಗೊಳಿಸಲು ಆಕಳ ಹಾಲನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ಕಲ್ಯಾಣಚೌಕಿಮಠ ಕಾಮಧೇನು ಗೋಶಾಲೆ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಾಸ್ತ್ರಿ ಹೇಳಿದರು. ಪಟ್ಟಣದ ಶ್ರೀ ಪೇಟೆಬಸವೇಶ್ವರ ದೇವಸ್ಥಾನದಲ್ಲಿ ಕಲ್ಯಾಣಚೌಕಿಮಠ ಕಾಮಧೇನು ಗೋಶಾಲೆಯಿಂದ 100 ಮಿ.ಮೀ ಆಕಳಹಾಲು, 5 ಉತ್ತರಾಣಿಕಡ್ಡಿ, 108 ಬಿಲ್ವಪತ್ರಿಗಳನ್ನು ಬುಧವಾರ ಜನರಿಗೆ ವಿತರಿಸಿ ಮಾತನಾಡಿದರು, ಪ್ರತಿಯೊಬ್ಬ ರೈತ, ಸ್ಥಳಾವಕಾಶ ಇರುವ ಎಲ್ಲರೂ ಮನೆಗೊಂದು ದೇಸಿ ಆಕಳನ್ನು ಸಾಕಬೇಕು. ಆಕಳ ಸಾಕಣೆ, ರಕ್ಷಣೆ, ಪೋಷಣೆಯಿಂದ ನಾನಾ ರೋಗಗಳಿಂದ ವಿಮುಖರಾಗಿ ಆರೋಗ್ಯ ಗಳಿಸಲು ಸಾಧ್ಯ. ಅನನ್ಯ ಭಕ್ತಿಯಿಂದ ಶಿವನ ಧ್ಯಾನಿಸಿದಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದರು.
ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ, ಪ್ರಮುಖರಾದ ಘನಮಠದಯ್ಯ ಹಿರೇಮಠ, ಕೆ.ಎಂ ಹೇಮಯ್ಯಸ್ವಾಮಿ, ಕೆ.ಎಂ.ಸಿದ್ಧರಾಮಶಾಸ್ತ್ರಿ, ಡಿ.ಮೌನೇಶ್, ಮುಕ್ಕುಂದಿ ಶಿವಗಂಗಮ್ಮ, ಎಲಿಗಾರ ವೆಂಕಟರೆಡ್ಡಿ, ಸಂತೋಷ್ ಸೋಗಿ, ಎನ್.ಎಂ.ಪತ್ರೆಯ್ಯಸ್ವಾಮಿ, ಕೃಷ್ಣ ಎಸ್.ಪೋಳ್, ಉಗಾದಿ ಶಿವರಾಜ, ಶರಣಪ್ಪ ಗಾಣಗೀರ ಇತರರಿದ್ದರು.