ಜಿಲ್ಲೆ

ವೈವಾಹಿಕ ಸಂಬಂಧಗಳಲ್ಲಿ ಮಾಸುತ್ತಿದೆ ಗಟ್ಟಿತನ; ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ವಿಷಾದ

ಮುಂಗಾರು ಸೋನೆ ಕವನ ಸಂಕಲನ ಬಿಡುಗಡೆ

ಕಂಪ್ಲಿ: ಪ್ರಸ್ತುತ ದಿನಮಾನಗಳಲ್ಲಿ ವೈವಾಹಿಕ ಸಂಬಂಧಗಳಲ್ಲಿನ ಗಟ್ಟಿತನ ಮಾಸುತ್ತಿದ್ದು, ಈ ಬಗ್ಗೆ ಬರಹಗಾರರು ಗಂಭೀರವಾಗಿ ಗಮನಿಸಬೇಕು ಎಂದು ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಹೇಳಿದರು.

ಪಟ್ಟಣದ ಗಂಗಾ ಸಂಕೀರ್ಣದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ, ಲೇಖಕ ಜಿ.ಪ್ರಕಾಶ್ ಅವರ ‘ಮುಂಗಾರು ಸೋನೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಕೃತಿಯಲ್ಲಿ ಬದುಕು ಗಟ್ಟಿಗೊಳಿಸುವ ಕವಿತೆಗಳಿವೆ. ಬಡ ಲೇಖಕರ ಕೃತಿಗಳನ್ನು ಕೊಳ್ಳುವಲ್ಲಿ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಕಸಾಪದಿಂದ ಜಿಲ್ಲೆಯಾದ್ಯಂತ 5 ಜಿಲ್ಲಾ ಸಮ್ಮೇಳನ, 55 ತಾಲೂಕು ಸಮ್ಮೇಳನ ಹಾಗೂ ದತ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಈ ಕವನ ಸಂಕಲನವನ್ನು ಪ್ರತಿಯೊಬ್ಬರೂ ಖರೀದಿಸಿ ಓದಿ ಲೇಖಕರನ್ನು ಪೋತ್ಸಾಹಿಸಬೇಕು ಎಂದರು.

ಕವನ ಸಂಕಲನ ಬಿಡುಗಡೆಗೊಳಿಸಿದ ಕನ್ನಡ ಹಿತರಕ್ಷಕ ಸಂಘದ ಗೌರವಾಧ್ಯಕ್ಷ ಕ.ಮ.ಹೇಮಯ್ಯಸ್ವಾಮಿ ಮಾತನಾಡಿ, ಪಾಶ್ಚಾತ್ಯ ಜೀವನಶೈಲಿಯ ಅನುಕರಣೆಯಿಂದ ಭಾರತೀಯ ಜೀವನ ಶೈಲಿ ಬದಲಾಗುತ್ತಿರುವುದು ಆತಂಕಕಾರಿಯಾಗಿದೆ. ಮದುವೆಯಾಗದೆ ಸಹ ಜೀವನ ನಡೆಸುವಲ್ಲಿ ಯುವಜನತೆ ಮುಂದಾಗುತ್ತಿರುವುದು ದುರಂತವೇ ಸರಿ. ಕೌಟುಂಬಿಕ ದೌರ್ಜನ್ಯದಲ್ಲಿ ಮಹಿಳೆ ಬಲಿಯಾಗುತ್ತಿದ್ದಾಳೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಕನ್ನಡ ಭಾಷೆಯ ಪ್ರಸ್ತುತ ಸ್ಥಿತಿಗತಿ’ ಕುರಿತು ಉಪನ್ಯಾಸ ನೀಡಿದ ರಾಜ್ಯೋತ್ಸವ ನಿಮಿತ್ತ ಚಿಕ್ಕಜಾಯಿಗನೂರು ಶಿಕ್ಷಕ ಮುದುಕಪ್ಪ ನೆಲಜೇರಿ, ಕನ್ನಡ ಭಾಷೆಗೆ ಸೇರುತ್ತಿರುವ ಅನ್ಯಭಾಷೆಯ ಪದಗಳಿಗೆ ಪರ್ಯಾಯವಾಗಿ ಕನ್ನಡ ನಿಘಂಟು ರಚಿಸುವಲ್ಲಿ ಕನ್ನಡ ವಿವಿಯು ಮುಂದಾಗಬೇಕು. ಕನ್ನಡ ಮಾಧ್ಯಮದಲ್ಲಿಯೇ ಉನ್ನತ ಶಿಕ್ಷಣ ದೊರಕುವಂತಾಗಬೇಕು ಎಂದರು.

ಸಂಗೀತ ಭಾರತಿ ಸಂಸ್ಥಾಪಕ ಎಚ್.ಪಿ.ಕಲ್ಲಂಭಟ್, ನಾಟ್ಯನಾದ ಕಲಾಕುಟೀರದ ಸಂಸ್ಥಾಪಕಿ ಶಾಲಿನಿ ಜಯಂತ್, ಲೇಖಕ ಜಿ.ಪ್ರಕಾಶ್, ಪ್ರತಿಷ್ಠಾನದ ಕಾರ್ಯದರ್ಶಿ ಈರಪ್ಪ ಸೊರಟೂರ ಇತರರಿದ್ದರು.