ಕಂಪ್ಲಿ ಪಟ್ಟಣದ ಜೆಸ್ಕಾಂ ಎಇಇ ಕಚೇರಿ. 
ಜಿಲ್ಲೆ

ಕಂಪ್ಲಿಯಲ್ಲಿ ಆರಂಭವಾಗದ ಎಇಇ ಕಚೇರಿ

ಕಡತಕ್ಕೆ ಸೀಮಿತವಾದ ಕಲಬುರಗಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆದೇಶ

ಬಂಗಿ ದೊಡ್ಡಮಂಜುನಾಥ

ಕಂಪ್ಲಿ: ಪಟ್ಟಣದಲ್ಲಿ ಜೆಸ್ಕಾಂ ಎಇಇ ಕಚೇರಿ ಮಂಜೂರಾಗಿ ತಿಂಗಳಾದರೂ ಕಾರ್ಯಾರಂಭ ಮಾಡಿಲ್ಲ. ಕೂಡಲೇ ಕಚೇರಿ ಆರಂಭಿಸುವಂತೆ ರೈತರು, ಗ್ರಾಹಕರು ಆಗ್ರಹಿಸಿದ್ದಾರೆ.

ಕಳೆದ ಜೂ.12ರಂದು ಕಲಬುರಗಿ ಜೆಸ್ಕಾಂ ಜನರಲ್ ಮ್ಯಾನೇಜರ್ ಆದೇಶ ಹೊರಡಿಸಿ ಹೊಸಪೇಟೆಯ ಸಬ್ ಡಿವಿಜನ್‌ಗೆ ಒಳಗೊಂಡಿದ್ದ ಕಂಪ್ಲಿಯನ್ನು ಬೇರ್ಪಡಿಸಿ, ಎಇಇ ಕಚೇರಿ ತೆರೆಯುವಂತೆ ಆದೇಶಿಸಿದ್ದಾರೆ. ಎಇಇ ಕಚೇರಿ ಅನುಮೋದನೆಯೊಂದಿಗೆ ಒಂದು ಹುದ್ದೆ ಎಇಇ, ಒಂದು ಹುದ್ದೆ ಎಇ (ಟೆಕ್ನಿಕಲ್), ಇಬ್ಬರು ಮೀಟರ್ ರೀಡರ್ ಸೇರಿ ನಾಲ್ಕು ಹುದ್ದೆಗಳನ್ನು ಸೃಜಿಸಿ ಅನುಮೋದಿಸಿದ್ದರು. ಆದರೆ ಆದೇಶ ಕಡತಕ್ಕೆ ಮಾತ್ರ ಸೀಮಿತವಾಗಿದೆ.

ತಾಲೂಕಿನಲ್ಲಿ ಒಟ್ಟು ಐದು ಸಬ್ ಸ್ಟೇಷನ್‌ಗಳಿವೆ. ಕಂಪ್ಲಿ, ಮೆಟ್ರಿಯಲ್ಲಿ 110/11ಕೆವಿ ಎಂ.ಯು.ಎಸ್.ಎಸ್(ಮಿಲಿನಿಯನ್ ಯೂನಿಟ್ ಸಬ್ ಸ್ಟೇಷನ್), ಕಂಪ್ಲಿ, ಇಟಗಿ ಮತ್ತು ಎಮ್ಮಿಗನೂರು ಗ್ರಾಮಗಳಲ್ಲಿನ 33/11ಕೆವಿ ಎಂಯುಎಸ್‌ಎಸ್ ಅನ್ನು 110/11ಕೆವಿಗೆ ಮೇಲ್ದರ್ಜೆಗೇರಿಸಿದ ಸಬ್ ಸ್ಟೇಷನ್‌ಗಳಿವೆ. ಕಂಪ್ಲಿ ಜೆಸ್ಕಾಂ ವ್ಯಾಪ್ತಿಯಲ್ಲಿ ಗೃಹಬಳಕೆ, ಕೈಗಾರಿಕೆ, ವಾಣಿಜ್ಯ ಸೇರಿ ಒಟ್ಟಾರೆ 36,998 ಗ್ರಾಹಕ ಸ್ಥಾವರಗಳಿದ್ದು ನಿತ್ಯ 39.18 ಎಂಯು(3 ಕೋಟಿ 91ಲಕ್ಷ 80ಸಾವಿರ) ಯೂನಿಟ್ ವಿದ್ಯುತ್ ಗ್ರಾಹಕರಿಗೆ ಒದಗಿಸಲಾಗುತ್ತಿದೆ.

ಕಂಪ್ಲಿ ತಾಲೂಕು ವಿಜಯನಗರದಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರಿಂದ ಹೊಸಪೇಟೆಯಲ್ಲಿನ ಎಇಇ ಕಚೇರಿಗೆ ಸೇರಿದ್ದ ಕಂಪ್ಲಿ ವಿಭಾಗೀಯ ಕಚೇರಿಯು ಬಳ್ಳಾರಿ ಜಿಲ್ಲೆಯ ಡಿವಿಜನ್‌ಗೆ ಒಳಪಡಿಸಲಾಗಿದೆ. ಪಟ್ಟಣದಲ್ಲಿ ಎಇಇ ಕಚೇರಿ ಆರಂಭದಿಂದ ರೈತರು, ಗ್ರಾಹಕರು ಹೊಸಪೇಟೆಗೆ ತೆರಳುವುದು ತಪ್ಪಲಿದೆ. ಗುಣಮಟ್ಟದ ವಿದ್ಯುತ್ ಸಕಾಲಕ್ಕೆ ಒದಗಿಸಲು ಪ್ರಯೋಜವಾಗಲಿದೆ. ವಿದ್ಯುತ್ ಸಮಸ್ಯೆಗಳಿಗೆ ತುರ್ತು ಪರಿಹಾರ ದೊರಕಲು ಸಾಧ್ಯವಾಗಲಿದೆ ಎಂಬುದು ಜನರ ಅಭಿಪ್ರಾಯ.

ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿಯೇ ಎಇಇ ಕಚೇರಿ ಆರಂಭಿಸಲು ಹಿರಿಯ ಅಧಿಕಾರಿಗಳು ಉದ್ದೇಶಿಸಿದ್ದಾರೆ. ಇಷ್ಟರಲ್ಲಿಯೇ ಎಇಇ ಕಚೇರಿಯನ್ನು ಆರಂಭಿಸುವ ಸಿದ್ಧತೆಗಳು ನಡೆಯಲಿವೆ ಎಂದು ಇಲ್ಲಿನ ಜೆಸ್ಕಾಂ ಎಇ ವಿನೋದಕುಮಾರ್ ಬ್ಯಾಲಾಳ್ ತಿಳಿಸಿದ್ದಾರೆ.

ಕಂಪ್ಲಿಯಲ್ಲಿ ಎಇಇ ಕಚೇರಿ ಆರಂಭಿಸಲು ಜೆಸ್ಕಾಂ ಕಾರ್ಪೊರೇಟ್ ಕಚೇರಿಯಿಂದ ಅನುಮೋದನೆ ದೊರೆತಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಿದೆ.ಜೆ.ದಯಾನಂದ ಎಇಇ,ಜೆಸ್ಕಾಂ ಗ್ರಾಮೀಣ ಉಪ ವಿಭಾಗ, ಹೊಸಪೇಟೆ
ಕಂಪ್ಲಿ ಜೆಸ್ಕಾಂ ವಿಭಾಗೀಯ ಕಚೇರಿ ಹೊಸಪೇಟೆ ಸಬ್ ಡಿವಿಜನ್‌ನಿಂದ ಬೇರ್ಪಟ್ಟು, ಕಂಪ್ಲಿಯ ಲ್ಲಿಯೇ ಸಬ್ ಡಿವಿಜನಲ್ ಕಚೇರಿ ತೆರೆಯಲು ಅನುಮೋದನೆ ದೊರಕಿದೆ. ಇದರಿಂದ ವಿದ್ಯುತ್ ಗ್ರಾಹಕರಿಗೆ, ವಿದ್ಯುತ್ ಗುತ್ತಿಗೆದಾರರಿಗೆ ತುಂಬ ಅನುಕೂಲವಾಗಿದೆ. ಕೂಡಲೇ ಎಇಇ ಕಚೇರಿ ಆರಂಭಿಸಬೇಕು.ಬಿ.ವಿ.ಗೌಡ ಜಿಲ್ಲಾಧ್ಯಕ್ಷ, ರೈತ ಸಂಘ, ಕಂಪ್ಲಿ