ಕಂಪ್ಲಿ: ಗ್ರಾಪಂ ಸಿಬ್ಬಂದಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜು.13ರಂದು ಬಳ್ಳಾರಿಯ ಕಾರ್ಮಿಕ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಗ್ರಾಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್.ಬಸವರಾಜ್ ತಿಳಿಸಿದ್ದಾರೆ.
ಇಲ್ಲಿನ ಅತಿಥಿ ಗೃಹ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸಮಿತಿ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಈಗಾಗಲೇ ಕಾರ್ಮಿಕ ಆಯುಕ್ತರು, ಕಾರ್ಮಿಕ ಸಚಿವರು ಮತ್ತು ಮುಖ್ಯಮಂತ್ರಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿದೆ. ಸೂಕ್ತ ಸ್ಪಂದನೆ ಸಿಕ್ಕಿಲ್ಲ. ನಿತ್ಯ ಉಪಯೋಗಿ ಸರಕು, ಸಾಮಗ್ರಿ ಬೆಲೆ ದಿನೇದಿನೆ ಹೆಚ್ಚುತ್ತಿದೆ. ಐದು ವರ್ಷಗಳಿಂದ ವೇತನ ಹೆಚ್ಚಳವಾಗಿಲ್ಲ. ಗ್ರಾಪಂಗಳಲ್ಲಿ ದಲಿತರು, ಶೋಷಿತರು, ಆರ್ಥಿಕವಾಗಿ ಹಿಂದುಳಿದವರು ನೌಕರರಾಗಿದ್ದು, ಅವರಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಗ್ರಾಪಂನ ಬಿಲ್‌ಕಲೆಕ್ಟರ್, ಗುಮಾಸ್ತ, ಡಿಇಒಗಳಿಗೆ ಮಾಸಿಕ 38,021ರೂ., ವಾಟರ್‌ಮನ್, ಪಂಪ್‌ಆಪರೇಟರ್‌ಗಳಿಗೆ ಮಾಸಿಕ 33,062 ರೂ., ಅಟೆಂಡರ್‌ಗಳಿಗೆ 28,750 ರೂ., ಸ್ವಚ್ಛತೆ ಮಾಡುವವರಿಗೆ 25,000ರೂ. ವೇತನ ನೀಡಬೇಕಿದೆ. ಸುಪ್ರಿಂ ಕೋರ್ಟ್ ನಿಗದಿಪಡಿಸಿದ ಕನಿಷ್ಠ ವೇತನ ನೀಡದಿದ್ದಲ್ಲಿ ಜುಲೈ ಕೊನೇ ವಾರದಲ್ಲಿ ಬೆಂಗಳೂರಿನ ಕಾರ್ಮಿಕ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಚ್.ಶಿವಪ್ಪ ಮೆಟ್ರಿ, ಕುರುಗೋಡು ತಾಲೂಕು ಅಧ್ಯಕ್ಷ ರಾಜಾಸಾಬ್, ಪದಾಧಿಕಾರಿಗಳಾದ ಜಡೆಯ್ಯಸ್ವಾಮಿ, ಪರಮೇಶ್ವರ, ಡಿ.ರವಿಕುಮಾರ್, ವೀರಾಸೇನಾರೆಡ್ಡಿ, ಜಿ.ರುದ್ರಪ್ಪ ಇತರರಿದ್ದರು.