ಬಂಗಿ ದೊಡ್ಡಮಂಜುನಾಥ
ಕಂಪ್ಲಿ: ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರ ಕುಸಿದಿದ್ದು, ಸಾಕಷ್ಟು ಖರ್ಚು ಮಾಡಿ ಬೆಳೆದಿರುವ ರೈತರಿಗೆ ನಷ್ಟದ ಭೀತಿ ಎದುರಾಗಿದೆ.
ಒಂದು ಎಕರೆ ಮೆಣಸಿನಕಾಯಿ ಬೆಳೆಯಲು 1.80 ರಿಂದ 2 ಲಕ್ಷ ರೂ. .ಖರ್ಚು ಮಾಡಿದ್ದು, ಎಕರೆಗೆ 75 ಸಾವಿರ ರೂ. ನಷ್ಟ ಅನುಭವಿಸುವಂತಾಗಿದೆ. ತಾಲೂಕಿನ 3,800 ಹೆಕ್ಟೇರ್ ಪ್ರದೇಶದಲ್ಲಿ ಬ್ಯಾಡಗಿ, ಕಡ್ಡಿ, 5531, ಡಬ್ಬಿ, ಲಕ್ಷ್ಮೀ ತಳಿಯ ಮೆಣಸಿನಕಾಯಿ ಬೆಳೆಯಲಾಗಿದ್ದು, ಸ್ಥಳೀಯ ಮಾರುಕಟ್ಟೆ ಕೊರತೆ, ಬೇಡಿಕೆ ಕುಸಿತ, ರೋಗಬಾಧೆ, ಕೂಲಿ, ಗುತ್ತಿಗೆ ದರ ಹೆಚ್ಚಳವೇ ದರ ಕುಸಿತಕ್ಕೆ ಕಾರಣ ಎನ್ನಲಾಗುತ್ತಿದೆ.
ಎಕರೆಗೆ 15 ಕ್ವಿಂಟಾಲ್ ಇಳುವರಿ ಬಂದಿದ್ದು, ಇದರಲ್ಲಿ ನಾಲ್ಕೈದು ಕ್ವಿಂಟಾಲ್ ಫಸಲು ಮಚ್ಛೆ(ಬಿಳಿ) ರೋಗಬಾಧೆಗೆ ತುತ್ತಾಗಿದೆ. 5531 ಎಂಬ ತಳಿಯ ಮೆಣಸಿನಕಾಯಿ ದರ 8 ರಿಂದ 11 ಸಾವಿರ ರೂ. ಇದೆ. ಆದರೆ, ಕೂಲಿ ದರದ ಜತೆಗೆ ಭೂಮಿ ಗುತ್ತಿಗೆ ದರವು ಪೈಪೋಟಿಗೇರಿದ್ದು ಎಕರೆಗೆ 50ರಿಂದ 60 ಸಾವಿರ ರೂ. ಇದೆ.
ಕಳೆದ ಬಾರಿ ಜಿಲ್ಲೆಯಲ್ಲಿ 59 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಆದರೆ, ಈ ಬಾರಿ 42 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಇಳಿಕೆಯಾಗಿದೆ. ಕಳೆದ ಬಾರಿ ಬೇಡಿಕೆ ಇದ್ದ ಕೋಲ್ಡ್ ಸ್ಟೋರೇಜ್‌ನಲ್ಲಿ ಈ ಬಾರಿ ಫಸಲು ಸಂಗ್ರಹಿಸಲು ರೈತರು ಮುಂದಾಗುತ್ತಿಲ್ಲ. ಬಾಡಿಗೆ ಕಟ್ಟುವುದು ಹೊರೆಯಾಗಲಿದೆ ಎಂಬುದು ಇದಕ್ಕೆ ಕಾರಣ.
ರಾಷ್ಟ್ರೀಯ, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಳ್ಳಾರಿ ಚಿಲ್ಲಿಗೆ ಬೇಡಿಕೆ ಕುಸಿಯುತ್ತಿದೆ. ಯಥೇಚ್ಛವಾಗಿ ರಸಗೊಬ್ಬರ, ಕೀಟನಾಶಕ ಬಳಕೆಯೇ ಇದಕ್ಕೆ ಕಾರಣ ಎನ್ನುವುದು ತಜ್ಞರ ಅಭಿಪ್ರಾಯ. ಅಂತರ ಬೆಳೆಯಾಗಿ ಚೆಂಡು ಹೂ, ಮೆಕ್ಕೆಜೋಳ ಬೆಳೆಯುವುದರಿಂದ, ನೀಲಿ ಹಳದಿ ಟ್ರಾಪ್ಸ್ ಬಳಕೆಯಿಂದಲೂ ರೋಗ, ಕೀಟಬಾಧೆಯನ್ನು ನಿಯಂತ್ರಿಸಬಹುದಾಗಿದೆ ಎನ್ನುವುದು ಕೃಷಿ ಅಧಿಕಾರಿಗಳ ಸಲಹೆ.
ಮೆಣಸಿನಕಾಯಿ ಕೊಳ್ಳಲು ವ್ಯಾಪಾರಿಗಳು ಬರುತ್ತಿಲ್ಲ. ನಮಗಂತೂ ನಷ್ಟ ತಪ್ಪಿದ್ದಲ್ಲ. ಬೆಳೆಗಾರರ ಕಷ್ಟ ಅರ್ಥೈಸಿಕೊಂಡು ಸರ್ಕಾರ ಬೆಂಬಲಬೆಲೆ ಘೋಷಿಸಬೇಕು. ತೋಟಗಾರಿಕೆ ಇಲಾಖೆಯಿಂದ ಚಿಲ್ಲಿ ಬೀಜ ಉಚಿತವಾಗಿ ವಿತರಿಸಬೇಕು. ಕುರುಗೋಡಿನಲ್ಲಿ ಚಿಲ್ಲಿ ಮಾರುಕಟ್ಟೆ ಆರಂಭಿಸಬೇಕು. ಕಂಪ್ಲಿಯಲ್ಲಿ ಚಿಲ್ಲಿ ಶೀತಲ ಗೋದಾಮು ನಿರ್ಮಿಸಬೇಕು. | ಎಸ್.ಆರ್.ಸುರೇಶಗೌಡ ಬೆಳೆಗಾರ, ಸುಗ್ಗೇನಳ್ಳಿ ರೈತರು ಗುಣಮಟ್ಟದ ಮೆಣಸಿನಕಾಯಿ ಬೆಳೆಯಲು ರಸಗೊಬ್ಬರ, ಕೀಟನಾಶಕ ಬಳಕೆಯನ್ನು ತೀವ್ರ ಪ್ರಮಾಣದಲ್ಲಿ ಕಡಿತಗೊಳಿಸಬೇಕು. ಅಂತರ ಬೆಳೆ ಬೆಳೆಯುವ ಮೂಲಕ ರೋಗ ಬಾಧೆ, ಕೀಟಬಾಧೆಯನ್ನು ನಿಯಂತ್ರಿಸಬೇಕು. ಬೆಳೆ ಪರಿವರ್ತನೆಯಿಂದಲೂ ಉತ್ತಮ ಗುಣಮಟ್ಟದ ಚಿಲ್ಲಿ ಬೆಳೆಯಬಹುದು. | ಸಂತೋಷ್ ಸಪ್ಪಂಡಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ, ಬಳ್ಳಾರಿ