ವರ್ಗ ಮಾಡಲು ಒತ್ತಾಯ
ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ವಿ.ನಾಗಪ್ಪ ಡಿಬಿಟಿ ಮಕ್ಕಳ ನಿಧಿ 1.16ಲಕ್ಷ ರೂ.ಬಿಡಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುರಿ ವೆಂಕಟೇಶ್ ಆರೋಪಿಸಿದರು.
ಮುಖ್ಯಶಿಕ್ಷಕರ ಕರ್ತವ್ಯಲೋಪದ ಕುರಿತು ಶಾಲಾವರಣದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಮಕ್ಕಳಿಗೆ ಕಳಪೆ ಬಿಸಿಯೂಟ ನೀಡುತ್ತಾರೆ. 750 ವಿದ್ಯಾರ್ಥಿಗಳಿದ್ದರೂ 300-350ಮಕ್ಕಳಿಗೆ ಮಾತ್ರ ಮೊಟ್ಟೆ ಕೊಡುತ್ತಾರೆ. ಸಕ್ಕರೆ ಇಲ್ಲ ಎನ್ನುವ ನೆಪ ಹೇಳಿ ಸೋಮವಾರ ಹಾಲು ವಿತರಿಸಿಲ್ಲ. ಒಂದೂವರೆ ವರ್ಷದಿಂದ ಎಸ್‌ಡಿಎಂಸಿ ಸಭೆ ಕರೆದಿಲ್ಲ. ಶಾಲೆಗೆ ಬಂದು ಸಹಿ ಹಾಕಿ ಹೊರಗೆ ಹೋಗುತ್ತಾರೆ. ಅವರ ಮನೆಗೆ ಹೋಗಿ ದಾಖಲೆಗಳಿಗೆ ರುಜು ಮಾಡಿಸಿಕೊಳ್ಳಬೇಕಿದೆ. ಶಿಕ್ಷಕರ ಜತೆ ಸಮನ್ವಯ ಇಲ್ಲ. ಈ ಕುರಿತು ಬಿಇಒ, ಡಿಡಿಪಿಐ, ಜಂಟಿ ನಿರ್ದೇಶಕರು, ತಹಸೀಲ್ದಾರ್ ಗಮನಕ್ಕೆ ತರಲಾಗಿದೆ. ಪ್ರಯೋಜನವಾಗಿಲ್ಲ. ಕೂಡಲೇ ಇವರನ್ನು ವರ್ಗ ಮಾಡಬೇಕು. ಇಲ್ಲದಿದ್ದರೆ ಶಾಲೆಗೆ ಬೀಗ ಜಡಿದು ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರಮುಖರಾದ ವಡ್ಡಿನ ಮುದೆಪ್ಪ, ಪಿ.ಪಂಪಾಪತಿ, ಕುರಿ ನಾಗಪ್ಪ, ಬೆಸ್ತರ ಸೋಮಶೇಖರ್, ವಿ.ವೆಂಕಟೇಶ್, ಗುಬಾಜಿ ಬಲಕುಂದೆಪ್ಪ ಇತರರು ಇದ್ದರು.
ಆರೋಪ ತಳ್ಳಿಹಾಕಿದ ಮುಖ್ಯಶಿಕ್ಷಕ : ಕರ್ತವ್ಯದ ಸಮಯದಲ್ಲಿ ಶಾಲೆಯಲ್ಲಿರುತ್ತೇನೆ. ಎಸ್‌ಡಿಎಂಸಿ ಸಭೆ ಕರೆದರೆ ಯಾರೂ ಬರುವುದಿಲ್ಲ. ಮನೆಗೆ ಕಳುಹಿಸಿ ಸಹಿ ಮಾಡಿಸಲಾಗುತ್ತಿದೆ. ಬಿಸಿಯೂಟ ನಿರ್ವಹಣೆಗಾಗಿ ಡಿಬಿಟಿ ಮಕ್ಕಳ ನಿಧಿಯಿಂದ ಬಿಡಿಸಿಕೊಂಡ 1.16ಲಕ್ಷ ರೂ.ಪುನಃ ಜಮೆ ಮಾಡಲಾಗಿದೆ. ಎಸ್‌ಡಿಎಂಸಿ ಅಧ್ಯಕ್ಷರ ಆರೋಪಗಳಲ್ಲಿ ಹುರುಳಿಲ್ಲ. ಶಾಲಾ ಶಿಕ್ಷಕರಲ್ಲಿ ಸಮನ್ವಯದ ಕೊರತೆಯಿದ್ದು ಸರಿಪಡಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ದೇವಸಮುದ್ರ ಸಹಿಪ್ರಾ ಶಾಲೆಯ ಮುಖ್ಯ ಶಿಕ್ಷಕ ವಿ.ನಾಗಪ್ಪ ಪ್ರತಿಕ್ರಿಯೆ ನೀಡಿದ್ದಾರೆ.