ಕಂಪ್ಲಿ: ತಾಲೂಕಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಪ್ರಮಾಣ ಪತ್ರಗಳಿಗೆ ಮೇಲು ರುಜು ಮಾಡಲು ಅಧಿಕಾರಿಯನ್ನು ಶಿಕ್ಷಣ ಇಲಾಖೆ ನಿಯೋಜಿಸಿದ್ದು, ಅನುಕೂಲವಾಗಿದೆ.
ಕಂಪ್ಲಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರಿದ್ದು ಇದೀಗ ಬಳ್ಳಾರಿ ಪಶ್ಚಿಮ ವಲಯ ಕುರುಗೋಡು ಬಿಇಒ ಆಡಳಿತಕ್ಕೆ ಒಳಪಟ್ಟಿದೆ. ಕಂಪ್ಲಿಯಿಂದ ಕುರುಗೋಡು 30ಕಿಮೀ ದೂರದಲ್ಲಿದ್ದು ಪ್ರಮಾಣಪತ್ರಗಳ ಮೇಲು ರುಜುಗೆ ಕುರುಗೋಡುಗೆ ಹೋಗಬೇಕಿತ್ತು.
ಇದೀಗ ಕಂಪ್ಲಿಯಲ್ಲಿಯೇ ಮೇಲು ರುಜು ಮಾಡುವ ಅಧಿಕಾರವನ್ನು ಇಲ್ಲಿನ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು(ಪ್ರೌಢಶಾಲೆ) ಉಪ ಪ್ರಾಚಾರ್ಯೆ ಸುಜಾತಾ ಅವರಿಗೆ ನೀಡಿದೆ. ಇದರಿಂದ ಕಂಪ್ಲಿ ತಾಲೂಕಿನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 371(ಜೆ) ಸೌಲಭ್ಯ ಪಡೆಯುವ ಸಲುವಾಗಿ ಕನ್ನಡ ಮಾಧ್ಯಮ, ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರಗಳನ್ನು ಮೇಲು ರುಜು ಮಾಡುವ ಅಧಿಕಾರವನ್ನು ನೀಡಿದೆ ಎಂದು ಕುರುಗೋಡು ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ ತಿಳಿಸಿದ್ದಾರೆ.
ತಾಲೂಕು ಕೇಂದ್ರ ಆಗಿದ್ದಾಗಿನಿಂದಲೂ ಬಿಇಒ ಕಚೇರಿ ಆರಂಭಿಸುವಂತೆ ಶಿಕ್ಷಕ ಸಂಘಟನೆ ಹೋರಾಡುತ್ತಲೇ ಬಂದಿದೆ. ಕಳೆದ ಎರಡು ವರ್ಷಗಳಿಂದ ಕನಿಷ್ಠ ಪಕ್ಷ ಮೇಲು ರುಜು ಮಾಡಲು ಅಧಿಕಾರಿ ನಿಯೋಜಿಸುವಂತೆ ಒತ್ತಾಯಿಸಿದ ಫಲವಾಗಿ, ಅಧಿಕಾರಿಯನ್ನು ನೇಮಿಸಿದ್ದು ಸ್ವಾಗತಾರ್ಹ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ ತಿಳಿಸಿದ್ದಾರೆ.
ಮೇ 28ರಂದು ವಿಜಯವಾಣಿ ಮೇಲು ರುಜುಗಾಗಿ ಅಲೆದಾಟ-ಅಧಿಕಾರಿ ನಿಯೋಜನೆಗೆ ಒತ್ತಾಯ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.