ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಕಣಿವೆ ಮಾರೆಮ್ಮ ದೇವಸ್ಥಾನ ಸುತ್ತಲಿನ ಹೊಲಗಳ ಮೇಲೆ ಪ್ರತಿದಿನ ಕರಡಿಗಳು ದಾಳಿ ಮಾಡಿ ಮೆಕ್ಕೆಜೋಳ ಬೆಳೆ ತಿಂದು ಹಾಕುತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ.
ಮಾರೆಮ್ಮ ದೇವಸ್ಥಾನ ಸನಿಹದ ಒಂದೂವರೆ ಎಕರೆಯ ಮೆಕ್ಕೆಜೋಳ ಬೆಳೆ ಕರಡಿಗಳ ಪಾಲಾಗಿದೆ. ನಿತ್ಯ ರಾತ್ರಿ ಹತ್ತು ಗಂಟೆವರೆಗೆ ರೈತರು ಜಮೀನಿನಲ್ಲಿದ್ದು, ಪಟಾಕಿ ಸಿಡಿಸಿ ಮನೆಗೆ ಬರುತ್ತಾರೆ. ಮಧ್ಯರಾತ್ರಿ ನಂತರ ಕರಡಿಗಳು ದಾಳಿ ಮಾಡಿ ಮೆಕ್ಕೆಜೋಳ ಹಾಳು ಮಾಡುತ್ತಿವೆ. ಕರಡಿಗಳು ನುಗ್ಗದಂತೆ ಹೊಲದ ಸುತ್ತಲೂ ತಂತಿ ಬಿಗಿದಿದ್ದರೂ ಅವುಗಳನ್ನು ಹರಿದು ಒಳ ನುಗ್ಗುತ್ತಿವೆ.
ಕಳೆದ ಎರಡೂವರೆ ತಿಂಗಳ ಹಿಂದೆ ನಾಟಿ ಮಾಡಿದ್ದ ಮೆಕ್ಕೆಜೋಳ ಸದ್ಯ ತೆನೆ ಹೊಡೆದು ಹಾಲು ತುಂಬುವ ಹಂತದಲ್ಲಿದೆ. ಸುಮಾರು 25ಸಾವಿರ ರೂ. ವೆಚ್ಚ ಮಾಡಿದ್ದೇವೆ. ನಿತ್ಯ ಕರಡಿಗಳು ದಾಳಿ ಮಾಡುತ್ತಿದ್ದರಿಂದ ಮೆಕ್ಕೆಜೋಳ ಇಳುವರಿ ಮೇಲೆ ಪರಿಣಾಮ ಬೀರಲಿದೆ. ಕರಡಿಗಳಿಂದ ಮೆಕ್ಕೆಜೋಳ ಹಾಳಾಗುತ್ತಿದ್ದು, ಮುಂದಿನ ಬಾರಿ ಮೆಣಸಿನಕಾಯಿ ಬೆಳೆಯುವುದಾಗಿ ರೈತರಾದ ಕೆಂಗೂರಿ ಲಿಂಗಪ್ಪ, ಕೆ.ನಾಗಪ್ಪ ತಿಳಿಸಿದರು. ಕರಡಿಗಳ ದಾಳಿಯಿಂದ ಮೆಕ್ಕೆಜೋಳ ಬೆಳೆದ ರೈತರು ಆತಂಕಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳ ಉಪಟಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ರೈತರಾದ ಗೊರವರ ಅಂಜಿನಪ್ಪ, ಗೊರವರ ವೆಂಕಟೇಶಪ್ಪ, ಕೆ.ಹನುಮಂತಮ್ಮ ಇತರರು ಒತ್ತಾಯಿಸಿದ್ದಾರೆ.