ಕಂಪ್ಲಿಯಲ್ಲಿ ಪಿಐ ಕೆ.ಬಿ.ವಾಸುಕುಮಾರ್‌ಗೆ ಅಂಜುಮಾನ್-ಎ-ಖಿದ್ಮಾತೆ ಇಸ್ಲಾಂ ಕಮಿಟಿ ಮನವಿ ಸಲ್ಲಿಸಿತು.  
ಜಿಲ್ಲೆ

ಅವಹೇಳನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ

ಶಶಿಧರ ಎಲ್

ಕಂಪ್ಲಿ: ಪ್ರವಾದಿ ಪೈಗಂಬರ್ ಹಾಗೂ ಇಸ್ಲಾಂ ಧರ್ಮದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಧಾರ್ಮಿಕ ಮುಖಂಡರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ಅಂಜುಮಾನ್-ಎ-ಖಿದ್ಮಾತೆ ಇಸ್ಲಾಂ ಕಮಿಟಿ ಶುಕ್ರವಾರ ತಹಸೀಲ್ದಾರ್ ಎಸ್.ಶಿವರಾಜ, ಪಿಐ ಕೆ.ಬಿ.ವಾಸುಕುಮಾರ್‌ಗೆ ಮನವಿ ಸಲ್ಲಿಸಿತು.

ಮುಸ್ಲಿಂ ಧರ್ಮಗುರು ಸೈಯದ್ ಷಾಹ್ ಅಬುಲ್ ಹಸನ್ ಖಾದ್ರಿ ಮಾತನಾಡಿ, ಮಹಾರಾಷ್ಟ್ರದ ರಾಮಗಾರಿ ಮಹಾರಾಜ, ಉತ್ತರ ಪ್ರದೇಶದ ಗಾಜಿಯಾಬಾದಿನ ನರಸಿಂಗಾನಂದ ಅವರು ಪ್ರತ್ಯೇಕವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರವಾದಿ ಪೈಗಂಬರ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡುವ ಮೂಲಕ ಸಮಾಜದ ಸ್ವಾಸ್ಥ್ಯ ಕದಡುವಲ್ಲಿ ನಿರತರಾಗಿದ್ದಾರೆ.

ಇವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್‌ಐ ಆರ್ ದಾಖಲಾಗಿದ್ದರೂ ಸ್ಥಳೀಯ ಸರ್ಕಾರ, ಕೇಂದ್ರವಾಗಲಿ ಸೂಕ್ತ ಕಾನೂನು ಕ್ರಮ ಕೈಗೊಂಡಿಲ್ಲ. ನಾವು ಪ್ರವಾದಿ ಮೊಹಮ್ಮದರನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತೇವೆ.

ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಕೇಳಲು ನಾವು ತಯಾರಿಲ್ಲ. ಅವಹೇಳನಕಾರಿ ಹೇಳಿಕೆ ನೀಡಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಧರ್ಮಗುರುಗಳಾದ ಸೈಯದ್ ಷಾಹ್ ಅಬುತುರಾಬ್ ಖಾದ್ರಿ, ಸೈಯದ್ ಷಾಹ್ ಖಮರ್ ಸಾಹೇಬ್ ಇತರರಿದ್ದರು.