ಬಂಗಿ ದೊಡ್ಡಮಂಜುನಾಥಕಂಪ್ಲಿ: ಪಟ್ಟಣದಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ) ನಿರ್ಮಿಸಿದ್ದರೂ ಅಗತ್ಯ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಬಳಕೆಗಿಲ್ಲದಂತಾಗಿದೆ.
ಯಲ್ಲಮ್ಮಕ್ಯಾಂಪ್ ಬಳಿ ನಂ.10 ಮುದ್ದಾಪುರ ಗ್ರಾಮದ ಸರ್ವೇ ನಂಬರ್ 442/ಎ ನಾಲ್ಕು ಎಕರೆ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಿಸಲಾಗಿದೆ. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ 2021ರ ಜು.10ರಂದು ಭೂಮಿ ಪೂಜೆ ನೆರವೇರಿಸಲಾಗಿತ್ತು. 10 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಗೃಹ ಮಂಡಳಿ ಕಟ್ಟಡ ನಿರ್ಮಿಸಿದೆ. ಕಟ್ಟಡ ಎರಡು ಅಂತಸ್ತು ಹೊಂದಿದ್ದು, ನೆಲ ಮಹಡಿಯ 1620 ಚ.ಮೀ.ವಿಸ್ತೀರ್ಣ, ಮೊದಲ ಮಹಡಿ 1486 ಚ.ಮೀ. ಸೇರಿ ಒಟ್ಟು 3106 ಚ.ಮೀ (33,421ಚ.ಅಡಿ) ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ.
ಪ್ರಜಾಸೌಧಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಲು ಹೆಚ್ಚುವರಿ ಅನುದಾನದ ಅಗತ್ಯವಿದೆ. ಇದರಿಂದಾಗಿ ಬಳಕೆಗೆ ಇನ್ನೂ ಮುಕ್ತವಾಗಿಲ್ಲ. ಪ್ರಜಾಸೌಧದ ಮುಂಭಾಗದಲ್ಲಿ ಗಿಡ, ಬೇಲಿ ಬೆಳೆದು ಸ್ವಚ್ಛತೆ ಮರೀಚಿಕೆಯಾಗಿದೆ. ಕಟ್ಟಡದ ಮುಂಭಾಗದಿಂದ ಹೊಸಪೇಟೆ ಬೈಪಾಸ್ ರಸ್ತೆತನಕ ಸ್ವಚ್ಛಗೊಳಿಸಬೇಕಿದೆ. ಮಳೆ ನೀರು ನಿಂತು ಸಮಸ್ಯೆಯಾಗುತ್ತಿದೆ. ಇದರಿಂದಾಗಿ ತಗ್ಗುಗಳನ್ನು ಮುಚ್ಚಿ ನೆಲ ಸಮತಟ್ಟುಗೊಳಿಸಬೇಕಿದೆ. ತೋಟಗಾರಿಕೆ ಸಸ್ಯಗಳನ್ನು ಬೆಳೆಸಿ ಅಂದಗೊಳಿಸಬೇಕಿದೆ.
ಆಡಳಿತ ಸೌಧದ ನಾಲ್ಕು ಸಭಾಭವನ ಒಳಗೊಂಡಂತೆ ಕಟ್ಟಡದಲ್ಲಿ ಅಗತ್ಯ ಪೀಠೋಪಕರಣಗಳನ್ನು ಅಳವಡಿಸಬೇಕಿದೆ. ಆವರಣ ಗೋಡೆ ನಿರ್ಮಾಣಗೊಳ್ಳಬೇಕಿದೆ. ಈ ಕುರಿತು ತ್ವರಿತ ಕ್ರಮ ಕೈಗೊಂಡು ಕಟ್ಟಡ ಪಾಳು ಬೀಳುವುದನ್ನು ತಪ್ಪಿಸಬೇಕಿದೆ.
ಪ್ರಜಾಸೌಧದಲ್ಲಿ ಪೀಠೋಪಕರಣ, ಆವರಣ ಗೋಡೆ ನಿರ್ಮಾಣ, ತೋಟ, ಪೇವರ್ ಬ್ಲಾಕ್ ಅಳವಡಿಕೆಗೆ ಹೆಚ್ಚುವರಿ ಐದು ಕೋಟಿ ರೂ. ಕೋರಿ ಕೆಕೆಆರ್‌ಡಿಬಿಗೆ ಡಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಹಣ ಮಂಜೂರಾದ ಕೂಡಲೇ ಅಗತ್ಯ ಕಾಮಗಾರಿ ಆರಂಭಗೊಳ್ಳಲಿದೆ. ನಂತರ ಪ್ರಜಾಸೌಧ ಉದ್ಘಾಟನೆಗೆ ಕ್ರಮ ವಹಿಸಲಾಗುವುದು. | ಜೂಗಲ ಮಂಜುನಾಯಕ ತಹಸೀಲ್ದಾರ್, ಕಂಪ್ಲಿ ಪ್ರಜಾಸೌಧ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿದೆ. ಸರಿಯಾದ ಕ್ರಿಯಾಯೋಜನೆ ರೂಪಿಸದೆ ಹೆಚ್ಚುವರಿ ಅನುದಾನ ಮಂಜೂರಾತಿ ನಿರೀಕ್ಷೆಯಲ್ಲಿರುವುದು ಅಧಿಕಾರಿಗಳ ಬೇಜವಾಬ್ದಾರಿಯ ಪ್ರತೀಕವಾಗಿದೆ. ತುರ್ತಾಗಿ ಕಾಮಗಾರಿ ಪೂರ್ಣಗೊಳಿಸಿ ಪ್ರಜಾಸೌಧವನ್ನು ಪ್ರಜೆಗಳ ಬಳಕೆಗೆ ಒದಗಿಸಲಿ. | ವೈ.ಮುರಳಿಮೋಹನರೆಡ್ಡಿ ಬಿಜೆಪಿ ನಗರ ಘಟಕದ ಅಧ್ಯಕ್ಷ, ಕಂಪ್ಲಿ