ಕಂಪ್ಲಿ: ನಿರಂತರ ಮಳೆಯಿಂದ ಚಿಕ್ಕಜಾಯಿಗನೂರು ಗ್ರಾಮದಿಂದ ಹೊಸ ನೆಲ್ಲೂಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದ್ದು ವಾಹನ ಸವಾರರು ಪರದಾಡುವಂತಾಗಿದೆ. ರಸ್ತೆ ಹಾಳಾಗಿರುವುದರಿಂದ ರೈತರಿಗೆ ಜಮೀನಿಗೆ ಹೋಗಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆ.
ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಕೃಷಿ ಪರಿಕರಗಳನ್ನು ಸಾಗಿಸಲು ತೊಂದರೆಯಾಗುತ್ತಿದೆ. ಈ ರಸ್ತೆಯನ್ನು ಕೂಡಲೆ ಅಭಿವೃದ್ಧಿಗೊಳಿಸುವಂತೆ ಚಿಕ್ಕಜಾಯಿಗನೂರು ಗ್ರಾಮಸ್ಥರಾದ ಜೆ.ಕಾಟಂರಾಜು, ಬಿ.ಮಾರೆಪ್ಪ, ವಿ.ಗೋವಿಂದರಾಜು ಜಿ.ಪಂಪನಗೌಡ, ಡಿ.ವೆಂಕಟೇಶ ಇತರರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪಿಡಬ್ಲುೃಡಿ ಎಇಇ ಆನಂದ್ ಪಮ್ಮಾರ್, ಚಿಕ್ಕಜಾಯಿಗನೂರಿನಿಂದ ಹೊಸ ನೆಲ್ಲೂಡಿ ಗ್ರಾಮಕ್ಕೆ 2.4 ಕಿ.ಮೀ. ಅಂತರವಿದ್ದು, ಈಗಾಗಲೇ 1.4 ಕಿ.ಮೀ. ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಉಳಿದ 1 ಕಿ.ಮೀ. ರಸ್ತೆ ಅಭಿವೃದ್ಧಿಗೆ, ಕಿರು ಸೇತುವೆ ನಿರ್ಮಾಣಕ್ಕೆ ಒಟ್ಟಾರೆ 3 ಕೋಟಿ ರೂ. ಕ್ರಿಯಾಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.