ಕಂಪ್ಲಿ: ಬುಕ್ಕಸಾಗರ ಶ್ರೀಕರಿಸಿದ್ಧೇಶ್ವರ ಶಿವಾಚಾರ್ಯರ ಲಿಂಗಾಂಗ ಸಾಮರಸ್ಯದ 12ನೇವರ್ಷದ ಪುಣ್ಮಸ್ಮರಣೋತ್ಸವ ಹಾಗೂ ಶ್ರೀ ಕರಿಸಿದ್ಧೇಶ್ವರರ ಜಾತ್ರಾಮಹೋತ್ಸವ ನಿಮಿತ್ತ ಬುಕ್ಕನಟ್ಟಿಯ ಕರಿಬಸಯ್ಯ ಹಿರೇಮಠ ರಚಿಸಿದ ಶ್ರೀ ಕರಿಸಿದ್ಧೇಶ್ವರ ಲೀಲಾಮೃತ ಪುರಾಣ ಭಾನುವಾರ ಆರಂಭಗೊಂಡಿತು.
ಮರಿಯಮ್ಮನಹಳ್ಳಿಯ ಮಲ್ಲಿಕಾರ್ಜುನ ಶಿವಾಚಾರ್ಯರು ಪುರಾಣ ಆರಂಭಕ್ಕೆ ಚಾಲನೆ ನೀಡಿ, ಪುರಾಣ ಪ್ರವಚನಗಳು ಬದುಕನ್ನು ಹಸನಗೊಳಿಸುತ್ತವೆ. ಸಂಕೀರ್ಣ ಬದುಕನ್ನು ತಿಳಿಗೊಳಿಸುವ ಮೂಲಕ ಸಾರ್ಥಕತೆಯನ್ನು ಮೂಡಿಸುತ್ತವೆ. ಗುರುಹಿರಿಯರ ಉಪದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರಿಸಿದ್ಧೇಶ್ವರರ ಬದುಕು ಮತ್ತು ತತ್ವಾಆದರ್ಶಗಳು ಮಾದರಿಯಾಗಿವೆ ಎಂದರು.
ಬುಕ್ಕಸಾಗರದ ಶ್ರೀ ಕರಿಸಿದ್ಧೇಶ್ವರ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಕರಿಸಿದ್ಧೇಶ್ವರರ ತಪೋಶಕ್ತಿಯಿಂದ ಮಠದ ಅಭಿವೃದ್ಧಿ ಸಾಕಷ್ಟು ಉನ್ನತಿ ಸಾಧಿಸಿ, ಆಧ್ಯಾತ್ಮಿಕ, ಧಾರ್ಮಿಕ, ಸಾಮಾಜಿಕ ಸೇರಿ ನಾನಾ ವಲಯಗಳಲ್ಲಿ ಮಠ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ ಎಂದರು. ಪುರಾಣಕಾರರಾಗಿ ಮುದ್ದಾಪುರ ಕಂಬಳದಿನ್ನಿಯ ಶರಣಯ್ಯ ಶಾಸ್ತ್ರಿ, ಸಂಗೀತ ವಾಚಕರಾಗಿ ರಾಮಸಾಗರ ಸರ್ಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕ ರಾರಾವಿಯ ಚಿದಾನಂದ ಗವಾಯಿ, ಹಂಪಿ ಕನ್ನಡ ವಿವಿಯ ಕೆ.ದೊಡ್ಡಬಸಪ್ಪ ತಬಲಸಾತ್ ನೀಡಿದರು.
ಸಾಂಗತ್ರಯ ಸಂಸ್ಕೃತ ಪಾಠಶಾಲೆ ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರಶಾಸ್ತ್ರಿ, ಬುಕ್ಕಸಾಗರ ಪಾಠಶಾಲೆ ಪ್ರಾಚಾರ್ಯ ವೀರಯ್ಯಸ್ವಾಮಿ, ಪ್ರಮುಖರಾದ ಹಾವಳಗಿ ರುದ್ರಯ್ಯಸ್ವಾಮಿ, ಎಚ್.ಎಂ.ವಿಶ್ವನಾಥ, ಎಸ್.ಡಿ.ಬಸವರಾಜ, ಕ್ಯಾದಿಗೆಹಾಳ್ ಗಂಗಾಧರಸ್ವಾಮಿ, ಸಂತೋಷ್‌ಕುಮಾರ್ ಇತರರಿದ್ದರು.