ಕಂಪ್ಲಿಯಲ್ಲಿ ಕಟ್ಟಡ ಕಾರ್ಮಿಕರ ಶ್ರಮಶಕ್ತಿಯ ನಾಲ್ಕನೇ ಸಮ್ಮೇಳನದಲ್ಲಿ ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿದರು. ಪ್ರಮುಖರಾದ ಐ.ಹೊನ್ನೂರಸಾಬ್, ಜೆ.ಸತ್ಯಬಾಬು, ವಿ.ದೇವಣ್ಣ, ಬಂಡಿ ಬಸವರಾಜ, ಎಚ್.ಹೊನ್ನಮ್ಮ ಇತರರಿದ್ದರು. 
ಜಿಲ್ಲೆ

ಸರ್ಕಾರಗಳಿಂದ ಕಾರ್ಮಿಕರ ನಿರ್ಲಕ್ಷೃ

ಶ್ರೀನಾಥ

ಕಂಪ್ಲಿ: ಸಂಘಟಿತ ಹೋರಾಟದಿಂದ ಅರ್ಹ ಸೌಲಭ್ಯ ಗಳಿಸಲು ಸಾಧ್ಯ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಹೇಳಿದರು.

ಪಟ್ಟಣದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ತಾಲೂಕು ಸಮಿತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರ ಶ್ರಮಶಕ್ತಿಯ ನಾಲ್ಕನೇ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರವಹಿಸುವ ಕಟ್ಟಡ ಮತ್ತು ಇತರ ಕಾರ್ಮಿಕರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷಿಸಿವೆ ಎಂದು ದೂರಿದರು.

ಕಟ್ಟಡ ಕಾರ್ಮಿಕರಿಗೆ ಸಿಗಬೇಕಿರುವ ಶೈಕ್ಷಣಿಕ, ವಿವಾಹ ಧನ ಸಹಾಯ, ಸ್ವಾಭಾವಿಕ ಮರಣ ಅಂತ್ಯಕ್ರಿಯೆ ವೆಚ್ಚ, ವೈದ್ಯಕೀಯ ವೆಚ್ಚ, ಹೆರಿಗೆ ಸೌಲಭ್ಯ, ಬಾಂಡ್ ಹಣ ಸೇರಿದಂತೆ ನಾನಾ ಸೌಲಭ್ಯಗಳು ಮರೀಚಿಕೆಯಾಗಿವೆ. ಈ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಸರ್ಕಾರದ ಗಮನಸೆಳೆಯುವ ಅಗತ್ಯವಿದೆ ಎಂದರು.

ಫೆಡರೇಷನ್ ತಾಲೂಕು ಅಧ್ಯಕ್ಷ ಐ.ಹೊನ್ನೂರಸಾಬ್ ಮಾತನಾಡಿ, ಕಟ್ಟಡ ಮತ್ತು ಇತರ ಕಾರ್ಮಿಕರ ವಸತಿ, ನಿವೇಶನ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದು, ವಾರ್ಡ್ ಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ಪುರಸಭಾಡಳಿತ ಆಯ್ಕೆ ಮಾಡಿ ಪ್ರಕಟಿಸಬೇಕು. ಉದಾಸೀನ ತೋರಿದಲ್ಲಿ ಪುರಸಭೆ ಮುಂದೆ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು. ಕಾರ್ಮಿಕರಿಗೆ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಕಾರ್ಮಿಕ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಇದಕ್ಕೂ ಮುನ್ನ ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಆರಂಭಗೊಂಡ ಕಾರ್ಮಿಕರ ರ‌್ಯಾಲಿ ಪ್ರಮುಖ ಬೀದಿಗಳಲ್ಲಿ ಸಾಗಿತು. ಬಳಿಕ ಪುರಸಭೆ ಸಭಾಂಗಣದಲ್ಲಿ ವ್ಯವಸ್ಥಾಪಕ ಬಿ.ಮಲ್ಲಿಕಾರ್ಜುನಗೆ ಮನವಿ ಸಲ್ಲಿಸಲಾಯಿತು.

ಫೆಡರೇಷನ್ ಜಿಲ್ಲಾಧ್ಯಕ್ಷ ಜೆ.ಸತ್ಯಬಾಬು, ಪದಾಧಿಕಾರಿಗಳಾದ ವಿ.ದೇವಣ್ಣ, ಬಂಡಿ ಬಸವರಾಜ, ಸುಂಕಪ್ಪ, ಆರ್.ನಾಗರಾಜ, ಗಂಗಣ್ಣ, ಶಾಂತಪ್ಪ, ಎಚ್.ಹೊನ್ನಮ್ಮ, ಸುವರ್ಣಮ್ಮ, ಲಕ್ಷ್ಮಮ್ಮ, ಅಂಜಿನಮ್ಮ, ಕಾನಿರು ಮಲ್ಲೆಪ್ಪ, ಬಾಷಾ, ನಾಗರಾಜ, ದಸ್ತಗಿರಿ, ಹಡಪದ ಆನಂದ, ವೆಂಕಟೇಶ ನಾಯಕ ಇದ್ದರು.