ಕಂಪ್ಲಿ: ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಪಟ್ಟಣದ ಆರಾಧ್ಯ ದೈವ ಶ್ರೀಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಬಸವೇಶ್ವರ ಮೂರ್ತಿಗೆ ಗಂಧದ ಅಲಂಕಾರ ಮಾಡಲಾಗಿತ್ತು.
ಅರ್ಚಕರಾದ ಕೆ.ಎಂ.ಚಂದ್ರಶೇಖರಯ್ಯ ಮತ್ತು ಕೆ.ಸಿ.ಸಿದ್ಧರಾಮೇಶ್ವರಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪಂಚಾಮೃತಾಭಿಷೇಕ, ಅಷ್ಟಬಿಲ್ವಾರ್ಚನೆ, ಭಜನೆ, ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಭಕ್ತರು ಸರದಿಯಲ್ಲಿ ನಿಂತು ನೈವೇದ್ಯ ಅರ್ಪಿಸಿ ದೇವರ ದರ್ಶನ ಪಡೆದರು.
ಮೆರವಣಿಗೆ: ಸಮೃದ್ಧ ಮಳೆ, ಬೆಳೆ ಮತ್ತು ಲೋಕಕಲ್ಯಾಣಾರ್ಥ ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿ ಮತ್ತು ವೀರಶೈವ ಸಮಾಜದವರು ಶುಕ್ರವಾರ ಸಂಜೆ ಮಣ್ಣೆತ್ತಿನ ಮೆರವಣಿಗೆ ನಡೆಸಿದರು.
ಪಟ್ಟಣದ ಕಲಾವಿದ ಕುಂಬಾರ ಲಿಂಗಪ್ಪ ತಯಾರಿಸಿದ ಮಣ್ಣಿನ ಬಸವಣ್ಣನ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಅಂಬೇಡ್ಕರ್ ವೃತ್ತದತನಕ ಸಾಗಿ ಮರಳಿ ದೇವಸ್ಥಾನ ತಲುಪಿತು.
ಕೂಲಿಕಟ್ಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಎಲಿಗಾರ ವೆಂಕಟರಡ್ಡಿ, ಪದಾಧಿಕಾರಿಗಳಾದ ಜೀರು ಈಶಪ್ಪ, ಟಿ.ಶರಣಪ್ಪ, ಪಟ್ಟಣಶೆಟ್ಟಿ ಗಣೇಶ, ಮಹಾಂತೇಶ, ವೀರಶೈವ ಸಮಾಜದ ಪ್ರಮುಖರಾದ ಅರವಿ ಬಸವನಗೌಡ, ಘನಮಠದಯ್ಯ ಹಿರೇಮಠ, ಎಸ್.ಡಿ.ಬಸವರಾಜ ಇತರರಿದ್ದರು.