ಕಂಪ್ಲಿ: ತಾಲೂಕಿನ ಬಳ್ಳಾಪುರ ಗ್ರಾಮದ ರೈತನೊಬ್ಬ ನಾಲ್ಕು ವರ್ಷಗಳಿಂದ ಸಾವಯವ ಕೃಷಿ ಅಳವಡಿಸಿಕೊಂಡು ಲಾಭಗಳಿಸುತ್ತಿದ್ದಾರೆ.
ಕೃಷಿಯಲ್ಲಿ ಡಿಪ್ಲೊಮಾ ಶಿಕ್ಷಣ ಪಡೆದಿರುವ ಬಳ್ಳಾಪುರ ಗ್ರಾಮದ ರೈತ ಎಂ.ಎಂ.ಬಸವರಾಜ, ಒಂದು ಎಕರೆಯಲ್ಲಿ ಸಾವಯವ ಬೇಸಾಯ ಪದ್ಧತಿಯಲ್ಲಿ ಸುಗ್ಗಿಗೆ ಸೋನಾ ಮಸೂರಿ, ಬೇಸಿಗೆಗೆ ಆರ್.ಎನ್.ಆರ್ ತಳಿಯ ಭತ್ತ ಬೆಳೆ ಬೆಳೆಯುತ್ತಿದ್ದಾರೆ. ಎರಡು ಆಕಳು, ಎರಡು ಹೋರಿಗಳನ್ನು ಸಾಕಿದ್ದು, ಇವುಗಳ ಸೆಗಣಿ, ಮೂತ್ರ ಬಳಸಿ ಜೀವಾಮೃತ, ಗೋಕೃಪಾಮೃತ, ವೇಸ್ಟ್ ಡಿಕಾಂಪೋಸರ್, ಬಯೋಡೈಜಸ್ಟರ್ ಸ್ವತಃ ತಯಾರಿಸಿ ಬಳಸುತ್ತಿದ್ದರಿಂದ ರಾಸಾಯನಿಕ ಗೊಬ್ಬರ ಬಳಸುತ್ತಿಲ್ಲ. ಸಾವಯವ ಭತ್ತ ಬೆಳೆಯಲು ಎಕರೆಗೆ 18 ಸಾವಿರ ರೂ. ವ್ಯಯಿಸಿದ್ದು, 23 ಕ್ವಿಂಟಾಲ್ ಭತ್ತ ಇಳುವರಿ ಪಡೆದಿದ್ದಾರೆ. ಹೀಗಾಗಿ ಕೃಷಿ ಇಲಾಖೆ ಬಸವರಾಜ ಅವರನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ಬಳಸಿಕೊಳ್ಳುತ್ತಿದೆ. ನೀತಿ ಆಯೋಗದ ಸಂಕಲ್ಪ ಸಪ್ತಾಹ ಸಮಾವೇಶದಲ್ಲಿ ಪ್ರಶಂಸಾ ಪತ್ರ ಗಳಿಸಿದ್ದಾರೆ. ಮುಂಗಡವಾಗಿ ಬೇಡಿಕೆ ಇಡುವ ರೈತರಿಗೆ ಕೂಡಾ ಸಾವಯವ ಉತ್ಪನ್ನಗಳನ್ನು ಒದಗಿಸುತ್ತಾರೆ.
ಸದ್ಯ ಒಂದು ಎಕರೆಯಲ್ಲಿ ಸಾವಯವ ಭತ್ತ ಬೆಳೆಯುತ್ತಿದ್ದು ಲಾಭದಾಯಕವಾಗಿದೆ. ಮುಂದಿನ ದಿನಗಳಲ್ಲಿ ಎರಡು ಎಕರೆಯಲ್ಲಿ ಬೆಳೆಯಲು ಉದ್ದೇಶಿಸಿದ್ದೇನೆ. ಸಾವಯವ ಕೃಷಿಯಿಂದ ಮಣ್ಣು ಮತ್ತು ಕೃಷಿಕ, ಪರಿಸರದ ಆರೋಗ್ಯಕ್ಕೂ ಅನುಕೂಲ.| ಎಂ.ಎಂ.ಬಸವರಾಜ ಸಾವಯವ ಕೃಷಿಕ, ಬಳ್ಳಾಪುರ (ಮೊ.94834 18537) ರೈತ ಎಂ.ಎಂ.ಬಸವರಾಜ ಅವರು ಅಳವಡಿಸಿಕೊಂಡಿರುವ ಸಾವಯವ ಕೃಷಿ ಪದ್ಧತಿ ಮಾದರಿಯಾಗಿದೆ. ಸಾವಯವ ಕೃಷಿ ಮಾಹಿತಿಗಾಗಿ ರೈತರು, ಸೊಸೈಟಿ, ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ರೈತರು ಸಾವಯವ ಕೃಷಿ ಅಳವಡಿಸಿಕೊಳ್ಳವಲ್ಲಿ ಮುಂದಾಗಬೇಕು.| ಶ್ರೀಧರ್ ಕೃಷಿ ಅಧಿಕಾರಿ, ಕಂಪ್ಲಿ