ಕಂಪ್ಲಿ: ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಎಸ್ಸಿ, ಎಸ್ಟಿ ನಿರುದ್ಯೋಗಿಗಳ ಸಂಘದ ತಾಲೂಕು ಪದಾಧಿಕಾರಿಗಳು ಸಿಎಂಗೆ ಬರೆದ ಮನವಿ ಪತ್ರವನ್ನು ಇಲ್ಲಿನ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ವಕೀಲ ಮೋಹನ್‌ಕುಮಾರ್ ದಾನಪ್ಪಗೆ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಬಾಲಪ್ಪಯ್ಯನವರ ವೆಂಕಟೇಶ ಮಾತನಾಡಿ, ರಾಜ್ಯದ 21 ಇಲಾಖೆಗಳಲ್ಲಿನ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು. 2001ರ ನಂತರ ಉಳಿದ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳಿಗೆ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಭರ್ತಿಗೊಳಿಸಬೇಕು. ವಯೋಮಿತಿ ಮೀರುತ್ತಿರುವ ನಿರುದ್ಯೋಗಿಗಳಿಗೆ ಆದ್ಯತೆ ನೀಡಬೇಕು.
ಎಲ್ಲ ಇಲಾಖೆಗಳ ಎಸ್ಸಿ-ಎಸ್ಟಿ ಬ್ಯಾಕ್‌ಲಾಗ್ ಹುದ್ದೆ ಭರ್ತಿಗಾಗಿ ಏಕಾಕಾಲಕ್ಕೆ ಅಧಿಸೂಚನೆ ಹೊರಡಿಸಿ, 45 ವರ್ಷಗಳ ವಯೋಮಿತಿ ನಿಗದಿಗೊಳಿಸಬೇಕು. ಪ್ರತಿ ಹತ್ತು ವರ್ಷಕ್ಕೊಮ್ಮೆ ಎಸ್ಸಿ-ಎಸ್ಟಿ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೊಳಿಸಬೇಕಿದ್ದು 20 ವರ್ಷಗಳಾದರೂ ತುಂಬದೆ ಇರುವುದರಿಂದ ಪರಿಶಿಷ್ಟ ನಿರುದ್ಯೋಗಿಗಳಿಗೆ ಅನ್ಯಾಯವಾಗಿದೆ. ವಯಸ್ಸು ಮೀರುತ್ತಿದ್ದು ಕೂಡಲೇ ಎಲ್ಲ ಬ್ಯಾಕ್‌ಲಾಗ್ ಹುದ್ದೆ ಭರ್ತಿಗೊಳಿಸುವಂತೆ ಒತ್ತಾಯಿಸಿದರು.
ಸಂಘದ ಪದಾಧಿಕಾರಿಗಳಾದ ಸುಗಾಲಿ ವೆಂಕಟೇಶನಾಯ್ಕ, ಎಸ್. ಗಿರಿಮಲ್ಲಪ್ಪ, ತಿಮ್ಮಯ್ಯ, ಬಿ.ಮಂಜುನಾಥ, ಪಿ.ಟಿ.ವೀರಮಲ್ಲಪ್ಪ, ಎನ್.ದೇವಣ್ಣ, ಕೆ.ತಿಪ್ಪಣ್ಣ, ಸಿ.ಲಿಂಗಪ್ಪ, ರಾಮಂಜಿನಿ, ರಾಮಚಂದ್ರ ಛಲವಾದಿ ಇತರರಿದ್ದರು.