ಕಂಪ್ಲಿ: ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಕಲಶಾರೋಹಣ, ಅನುಭವ ಮಂಟಪ ಕಟ್ಟಡ ಉದ್ಘಾಟನೆ, ಪ್ರವಚನ, ಅಕ್ಕಮಹಾದೇವಿ ಜಯಂತ್ಯುತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.
ಪೇಟೆ ಬಸವೇಶ್ವರ ದೇವಸ್ಥಾನದಿಂದ ಅಕ್ಕಮಹಾದೇವಿ ದೇವಸ್ಥಾನದತನಕ ಕಲಶ ಮೆರವಣಿಗೆ ನಡೆಯಿತು. ಸಂಜೆ ಅತ್ತಿವೇರಿ ಬಸವಧಾಮದ ಪ್ರವಚನಗಾರ್ತಿ ಬಸವ ಮಾತಾಜಿ ಅವರಿಂದ ಶರಣರ ಆಚಾರ-ವಿಚಾರ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ ಮಾತನಾಡಿ, ಏ.11ರ ತನಕ ನಿತ್ಯ ಸಂಜೆ 6 ಗಂಟೆಯಿಂದ ಪ್ರವಚನ ಹಮ್ಮಿಕೊಳ್ಳಲಾಗಿದೆ. 12 ರಂದು ನಿವೃತ್ತ ಪ್ರಾಚಾರ್ಯ ಎಂ.ಎಸ್.ಶಶಿಧರ ಶಾಸ್ತ್ರಿ ಅವರ ಪೌರೋಹಿತ್ಯದಲ್ಲಿ ಕಲಶಾರೋಹಣ, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು, ಬುಕ್ಕಸಾಗರದ ವಿಶ್ವಾರಾಧ್ಯ ಶಿವಾಚಾರ್ಯರಿಂದ ಅನುಭವ ಮಂಟಪ ಉದ್ಘಾಟನೆ, ಸಂಜೆ 4 ಗಂಟೆಗೆ ಅಕ್ಕಮಹಾದೇವಿ ಭಾವಚಿತ್ರ ಮೆರವಣಿಗೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಏ.13ರಂದು ಬೆಳಗ್ಗೆ 11 ಗಂಟೆಗೆ ಅಕ್ಕ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಮುಕ್ಕುಂದಿ ಶಿವಗಂಗಮ್ಮ ಅಧ್ಯಕ್ಷತೆಯಲ್ಲಿ, ಕೆ.ಎಂ.ಶ್ರೀರಕ್ಷಾ ವಚನ ಗಾಯನ ನಡೆಯಲಿದೆ. ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ, ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ಪಾಲ್ಗೊಳ್ಳಲಿದ್ದಾರೆ ಎಂದು ಮುಕ್ಕುಂದಿ ಶಿವಗಂಗಮ್ಮ ತಿಳಿಸಿದರು.
ಅಕ್ಕಮಹಾದೇವಿ ಮಹಿಳಾ ಮಂಡಳಿ, ವೀರಶೈವ ಲಿಂಗಾಯತ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.