ಜಿಲ್ಲೆ

ಮಡಿಗಾಲುವೆ ನಿರ್ಮಾಣದ ಬಾಕಿ ಹಣ ಪಾವತಿಸಿ

ಕಂಪ್ಲಿ: ನೀರಾವರಿ ಇಲಾಖೆಯ ಎಡಿಬಿ ಯೋಜನೆಯಡಿ ರೈತರೇ ನಿರ್ಮಿಸಿರುವ ಮಡಿಗಾಲುವೆಯ ಬಾಕಿ ಮೊತ್ತ ಪಾವತಿಸಲು ಒತ್ತಾಯಿಸಿ ತಾಲೂಕಿನ ನೀರು ಬಳಕೆದಾರರ ಸಂಘ ಪಟ್ಟಣದಲ್ಲಿ ದಿಶಾ ರಾಜ್ಯ ಸಮಿತಿ ಸದಸ್ಯ ಎ.ಸಿ.ದಾನಪ್ಪಗೆ ಬುಧವಾರ ಮನವಿ ಸಲ್ಲಿಸಿತು.

ರೈತ ಮುಖಂಡ ಪಿ.ಮೂಕಯ್ಯಸ್ವಾಮಿ ಮಾತನಾಡಿ, ರೈತರೇ ಮುತುವರ್ಜಿ ವಹಿಸಿ ಮಡಿಗಾಲುವೆಗಳನ್ನು ಗುಣಮಟ್ಟದಲ್ಲಿ ನಿರ್ಮಿಸಿಕೊಂಡಿದ್ದಾರೆ. ಈಗಾಗಲೇ ಶೇ.80 ಹಣ ಬಿಡುಗಡೆಯಾಗಿದೆ. ಇನ್ನು ಶೇ.20 ಬಾಕಿ ಇದೆ. ಬಾಕಿ ಮೊತ್ತವನ್ನು ಕೂಡಲೇ ರೈತರಿಗೆ ಬಿಡುಗಡೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ಮುತುವರ್ಜಿ ತೋರಬೇಕು ಎಂದು ಒತ್ತಾಯಿಸಿದರು.

ಸಣಾಪುರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಅಯ್ಯೋದಿ ವೆಂಕಟೇಶ ಮಾತನಾಡಿ, ರೈತರೇ ಮಡಿಗಾಲು ನಿರ್ಮಾಣ ಮಾಡಿಕೊಳ್ಳುವಲ್ಲಿ ನೀರಾವರಿ ಇಲಾಖೆ ಎಇಇ ಬಸಪ್ಪ ಜಾನಕರ್ ಸಹಕರಿಸಿದ್ದರಿಂದ ಕಡೆ ಅಂಚಿನ ಭೂಮಿಗೆ ನೀರೊದಗಿಸಲು ಸಾಧ್ಯವಾಗಿದೆ. ಬಾಕಿ ಮೊತ್ತ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯ ಎ.ಸಿ.ದಾನಪ್ಪ ಮಾತನಾಡಿ, ರೈತರ ಮಡಿಗಾಲುವೆ ನಿರ್ಮಾಣದ ಶೇ.20 ಬಾಕಿ ಬಿಡುಗಡೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ತಾಲೂಕಿನ ನಾನಾ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳಾದ ಎಸ್.ಚಂದ್ರಶೇಖರಗೌಡ, ಬಿ.ಗಂಗಾಧರ, ಕನಕಗಿರಿ ಬಸವರಾಜ, ಕೊನೇರು ಶ್ರೀಧರ್, ಯು.ಅರುಣಕುಮಾರ್, ಟಿ.ಗಂಗಣ್ಣ, ಡಿ.ಮುರಾರಿ, ನವೀನ್ ಮಣ್ಣೂರು, ತಿಮ್ಮಪ್ಪ, ರಾಮಸಾಗರ ರವಿ ಸೇರಿ ಇತರರಿದ್ದರು.