ಜಿಲ್ಲೆ

ಕಂಬಳವನ್ನು ಉಳಿಸುವ ಕೆಲಸ ನಿರಂತರ : ಶಾಸಕ ಅಶೋಕ್ ಕುಮಾರ್ ರೈ ಹೇಳಿಕೆ

ವಿಜಯವಾಣಿ ಸುದ್ದಿಜಾಲ ಕಡಬ

ಕಂಬಳ ಕ್ರೀಡೆಗೆ ಪೇಟಾದವರು 15 ವರ್ಷದಿಂದ ತೊಂದರೆ ಕೊಟ್ಟಿದ್ದಾರೆ. ಆದರೆ ನಾವು ಯಾವತ್ತೂ ಜಗ್ಗಲಿಲ್ಲ. ಕಂಬಳವನ್ನು ಉಳಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನದಿಂದಾಗಿ ನಮಗೆ ಗೌರವ ಬಂದಿದೆ. ಕಂಬಳ ಈಗ ವಿಶ್ವವ್ಯಾಪಿಯಾಗಿದೆ. ಅದನ್ನು ಉಳಿಸಬೇಕಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

ಕಡಬ ತಾಲೂಕು ಪಾಲ್ತಾಡಿ ಗ್ರಾಮದ ಚಾಕೊಟೆತ್ತಡಿ ಶ್ರೀ ಧರ್ಮರಸು ಉಳ್ಳಾಕುಲು ದೈವಸ್ಥಾನದ ಗದ್ದೆಯಲ್ಲಿ ಲೋಹಿತ್ ಬಂಗೇರ ಬಾಲಯ ನೇತೃತ್ವದಲ್ಲಿ ತಿಂಗಳಾಡಿ ಬಾಲಯ ಕಂಬಳ ತಂಡ ಆಶ್ರಯದಲ್ಲಿ ಸಾರಾಕರೆ ದಿ.ಶೀನಪ್ಪ ಪೂಜಾರಿ ಬೊಳಿಯಾಲ ಅವರ 21ನೇ ಸ್ಮರಣಾರ್ಥ 2ನೇ ವರ್ಷದ ಕೆಸರ್‌ಡೊಂಜಿ ದಿನ, ದಿ.ಕಮಲ ಶೀನಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ ಪ್ರದಾನ, ಕಂಬಳ ಉತ್ಸವದಲ್ಲಿ ಹೊನಲು ಬೆಳಕಿನ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಬಿ.ವಿ.ಸೂರ್ಯನಾರಾಯಣ ಮಾತನಾಡಿ, ಹಿರಿಯರ ಮಾಡಿದ ಕಾರ್ಯಗಳನ್ನು ಹಾಗೂ ಹಿರಿಯರನ್ನು ನೆನಪಿಸುವುದು ಎಲ್ಲರ ಕರ್ತವ ಎಂದರು. ಹೈಕೋರ್ಟ್‌ನ ವಕೀಲ ಎಂ.ರಾಜಣ್ಣ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಹಿಂದು ಮುಖಂಡ ಸತ್ಯಜಿತ್ ಸುರತ್ಕಲ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕಂಬಳ ಉತ್ಸವ, ಕೆಸರುಗದ್ದೆ ಕ್ರೀಡಾಕೂಟ ಮಾಡುವ ಮೂಲಕ ಲೋಹಿತ್ ಬಂಗೇರ ಹಾಗೂ ಬಾಲಯ ಕಂಬಳ ತಂಡ ಉತ್ತಮ ಕಾರ್ಯ ಮಾಡಿದೆ ಎಂದರು.

ಪ್ರಶಸ್ತಿ ಪ್ರದಾನ

2023-24ನೇ ಸಾಲಿನ ಕಂಬಳ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಪರ್ಧೆ ನೀಡಿದ ಜೋಡಿ ಕೋಣಗಳ ಯಜಮಾನರಿಗೆ ಪ್ರಶಸ್ತಿ ಪ್ರದಾನ ನಡೆಯಿತು. ಕೊಳಕೆ ಇರ್ವತ್ತೂರು ಭಾಸ್ಕರ ಕೊಟ್ಯಾನ್ ಅವರ ಪರವಾಗಿ ಕೊಳಕ್ಕೆ ಇರ್ವತ್ತೂರು ಪವನ್ ಕೋಟ್ಯಾನ್ ಅವರಿಗೆ, ಬೋಳಾರ ತ್ರಿಶಾಲ್ ಕೆ.ಪೂಜಾರಿ, ತಿಂಗಳಾಡಿ ಬಾಲಯ ಪುಷ್ಪಾವತಿ ಬಾಲಪ್ಪ ಸುವರ್ಣ ಅವರಿಗೆ ಅತಿಥಿ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿದರು. ತುಳು ಕಾರ್ಯಕ್ರಮ ನಿರೂಪಕಿ ಶ್ರೀನಿಧಿ ಪಿ.ಎಸ್.ಅವರನ್ನು ಸನ್ಮಾನಿಸಲಾಯಿತು.

ಪುಷ್ಪಾವತಿ ಬಾಳಪ್ಪ ಸುವರ್ಣ, ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ಕೃಷ್ಣ ಪ್ರಸಾದ್ ಆಳ್ವ, ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ, ಉಳ್ಳಾಕುಲು ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷ ತಾರಾನಾಥ ಬೊಳಿಯಾಲ, ರವೀಂದ್ರ ಪೂಜಾರಿ ಮರಕ್ಕೂರು, ಗಣೇಶ್ ಪೂಜಾರಿ ಮರಕ್ಕೂರು, ಮಾಧವ ಪೂಜಾರಿ ಎಲಿಕ, ಪುರಂದರ ಕೈಪಂಗಳ ದೋಳ, ರೋಶನ್ ಬಂಗೇರ ಬಾಲಯ, ರೋಹಿತ್ ಬಂಗೇರ ಅಡೀಲು, ನಿತಿನ್ ಬಂಗೇರ ಅಭೀರ ಮೊದಲಾದವರಿದ್ದರು.

ಸಂಪ್ಯ ಪೊಲೀಸ್ ಠಾಣಾ ಎಸೈ ಸುಷ್ಮಾ, ಬೆಳ್ಳಾರೆ ಠಾಣೆಯ ಎಸೈಗಳಾದ ಸಂತೋಷ್ ಬಿ.ಪಿ., ತಿಮ್ಮಪ್ಪ ನಾಯ್ಕ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಪ್ರವೀಣ್ ರೈ ನಡುಕೂಟೇಲು ಸ್ವಾಗತಿಸಿ, ಲೋಹಿತ್ ಬಂಗೇರ ಬಾಲಯ ವಂದಿಸಿದರು. ಶ್ರೀನಿಧಿ ಪಿ.ಎಸ್.ನಿರೂಪಿಸಿದರು.

ಆಕರ್ಷಕ ಕುಣಿತ ಭಜನೆ

ಕಾರ್ಯಕ್ರಮದಲ್ಲಿ ಸಂಜೆ 7ರಿಂದ ರಾತ್ರಿ 12 ಗಂಟೆಯವರೆಗೂ ಕುಣಿತ ಭಜನೆ ವಿವಿಧ ತಂಡಗಳಿಂದ ನಡೆಯಿತು. ಹೈಕೋರ್ಟ್ ವಕೀಲ ಎಂ.ರಾಜಣ್ಣ, ಸತ್ಯಜಿತ್ ಸುರತ್ಕಲ್, ಬಿ.ವಿ.ಸೂರ್ಯನಾರಾಯಣ ಚಾಲನೆ ನೀಡಿದರು. ಸದಾನಂದ ಆಚಾರ್ಯ, ರಾಜೇಶ್ ಮಯೂರ, ಮೀನಾಕ್ಷಿ ವಿ.ರೈ, ರಘುನಾಥ ರೈ ನಡುಕೂಟೇಲು ಮೊದಲಾದವರಿದ್ದರು.

ಪಾಲ್ತಾಡಿಯಲ್ಲಿ ಕಂಬಳ ಉತ್ಸವ ಈ ಬಾರಿಯೂ ಅಭೂತಪೂರ್ವ ಯಶಸ್ಸು ಕಂಡಿದೆ. ನಾನು ಈ ಕಾರ್ಯಕ್ರಮದಲ್ಲಿ ನಿಮಿತ್ತ ಮಾತ್ರ. ದೈವ, ದೇವರ ಪ್ರೇರಣೆ ಮತ್ತು ಹಿರಿಯರ ಆಶೀರ್ವಾದದಿಂದ ಇದು ಸಾಧ್ಯ. ಉಳ್ಳಾಕುಲು ಫ್ರೆಂಡ್ಸ್ ಕ್ಲಬ್ ಹಾಗೂ ಊರವರ ಸಹಕಾರ, ಬಾಲಯ ಕಂಬಳ ತಂಡದ ಬೆಂಬಲದಿಂದ ಮುಂದೆಯೂ ಇಂತಹ ಕಾರ್ಯಕ್ರಮ ಆಯೋಜಿಸಲಾಗುವುದು. - ಲೋಹಿತ್ ಬಂಗೇರ ಬಾಲಯ, ಕಾರ್ಯಕ್ರಮದ ಆಯೋಜಕ