ಜಿಲ್ಲೆ

ಕಂಬಳ ಚೈತನ್ಯ ನೀಡುವ ಕ್ರೀಡೆ: ತಗ್ಗರ್ಸೆ ಕಂಬಳೋತ್ಸವದಲ್ಲಿ ಶಾಂತಾರಾಮ ಶೆಟ್ಟಿ ಅನಿಸಿಕೆ

Dakshina Kannada

ಬೈಂದೂರು: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಕೃಷಿ ಚಟುವಟಿಕೆಯಲ್ಲಿರುವ ಪ್ರಾಣಿಗಳಿಗೆ ವಿಶೇಷ ಕಾಳಜಿ ಮತ್ತು ತರಬೇತಿ ನೀಡಿ ಕಂಬಳಗಳನ್ನು ಆಯೋಜಿಸಲಾಗುತ್ತದೆ. ಕೃಷಿಕರು ಪ್ರಕೃತಿಯನ್ನು ಪೂಜಿಸುವವರು, ಜಾನುವಾರುಗಳನ್ನು ಮಕ್ಕಳಂತೆ ಸಾಕುತ್ತಾರೆ. ಕೃಷಿ ಚಟುವಟಿಕೆಯ ಬಿಡುವಿನ ಅವಧಿಯಲ್ಲಿ ನಡೆಯುವ ಕಂಬಳಗಳು ಗ್ರಾಮೀಣ ಭಾಗದ ಜನರಿಗೆ ಚೈತನ್ಯ ನೀಡುವ ಉತ್ಸವಗಳಾಗಿವೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ಶೆಟ್ಟಿ ಬಾರ್ಕೂರು ಹೇಳಿದರು. ತಗ್ಗರ್ಸೆ ಕಂಠದಮನೆಯ ಸಾಂಪ್ರದಾಯಿಕ ಕಂಬಳೋತ್ಸವದಲ್ಲಿ ಮಾತನಾಡಿದರು.

ತಗ್ಗರ್ಸೆ ಕಂಠದಮನೆಯ ಮುಖ್ಯಸ್ಥ ಟಿ.ನಾರಾಯಣ ಹೆಗ್ಡೆ ಕಂಬಳೋತ್ಸವಕ್ಕೆ ಚಾಲನೆ ನೀಡಿದರು. ಬೈಂದೂರು ಭಾಗದ 70ಕ್ಕೂ ಅಧಿಕ ಜೋಡಿ ಕೋಣಗಳು ಕಂಬಳೋತ್ಸವದಲ್ಲಿ ಭಾಗವಹಿಸಿದ್ದವು. ಬಳಿಕ ಯುವಕರಿಗೆ ಕೆಸರುಗದ್ದೆ ಓಟ ಸ್ಪರ್ಧೆ ನಡೆಯಿತು. ರಾಘವೇಂದ್ರ ಶೆಟ್ಟಿ ಹಂಡಿಕೇರಿ, ಗೋಪಾಲ ನಾಯ್ಕ ಶಿರೂರು ಮುದ್ದುಮನೆ ಹಾಗೂ ಕಾಂತಾರ ಚಲನಚಿತ್ರ ನಟ ನಾಗರಾಜ ಪಾಣ ಅವರನ್ನು ಸನ್ಮಾನಿಸಲಾಯಿತು. ಕೋಣಗಳನ್ನು ಅತಿ ವೇಗವಾಗಿ ಓಡಿಸಿದ ಗೋಪಾಲ ನಾಯ್ಕ ಶಿರೂರು ಮುದ್ದುಮನೆ, ಮಂಜುನಾಥ ಗೌಡ, ಮಂಜುನಾಥ ದೇವಾಡಿಗ, ಗಣೇಶ ಕಂದಾವರ ಅವರನ್ನು ಗೌರವಿಸಲಾಯಿತು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಮಾಜಿ ಸದಸ್ಯರಾದ ಕೆ.ಬಾಬು ಶೆಟ್ಟಿ ತಗ್ಗರ್ಸೆ, ಸುರೇಶ ಬಟ್ವಾಡಿ, ಶಂಕರ ಪೂಜಾರಿ, ತಾಪಂ ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಬೈಂದೂರು ತಾಲೂಕು ಕಂಬಳ ಸಮಿತಿ ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು, ಬಿಜೆಪಿ ಮಂಡಲದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಕಂಠದಮನೆಯ ಬಾಲಕೃಷ್ಣ ಹೆಗ್ಡೆ, ಸತ್ಯರಂಜನ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು. ಜನ್ಮನೆ ರತ್ನಾಕರ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರ್ವಹಿಸಿದರು. ಕಿಶೋರ್ ಸಸಿಹಿತ್ಲು ವಂದಿಸಿದರು.

*ಫಲಿತಾಂಶ
ಹಲಗೆ ವಿಭಾಗ- ಪ್ರಥಮ: ನೀರಜ್ ಆತ್ಮಜ್ ಬಾರಕೂರು, ದ್ವಿತೀಯ: ಪವನ್ ಕುಮಾರ್ ಮಾಣಿಬೈಲು ಗಂಗೆಬೈಲು.
ಹಗ್ಗ ವಿಭಾಗ ಹಿರಿಯ- ಪ್ರಥಮ: ದಿ.ಕಾರಿಕಟ್ಟೆ ಮಹಾಬಲ ಶೆಟ್ಟಿ, ದ್ವಿತೀಯ: ವೆಂಕಟ ಪೂಜಾರಿ ಕಳವಾಡಿ.
ಹಗ್ಗ ವಿಭಾಗ ಕಿರಿಯ ಎ- ಪ್ರಥಮ: ನೆಲ್ಯಾಡಿ ದಿವಾಕರ ಶೆಟ್ಟಿ, ದ್ವಿತೀಯ: ಸಮೃದ್ಧಿ ಪ್ರಸಿದ್ಧಿ ದುರ್ಗಾ ಫ್ರೆಂಡ್ಸ್ ಕಂಚಿಕಾನು.
ಹಗ್ಗ ವಿಭಾಗ ಕಿರಿಯ ಬಿ- ಪ್ರಥಮ: ಕೋಟ ಪಡುಕೆರೆ ಮಣೂರು ದಿ.ಶೀನ ಪೂಜಾರಿ, ದ್ವಿತೀಯ: ಸ್ಕಂದ ಉಳ್ಳೂರು ಕಂದಾವರ.