ಜಿಲ್ಲೆ

ಹಿಂದೂ ಸಮಾಜದ ಹೋರಾಟಕ್ಕೆ ಸಂದ ಜಯ -ಶಾಸಕ ಕಾಮತ್

Mangaluru - Hariprasad Rai



ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ ಗಣೇಶೋತ್ಸವವನ್ನು ಈ ಹಿಂದಿನಂತೆ ಮುಂದುವರಿಸಿಕೊಂಡು ಹೋಗುವಂತೆ ಬಂದಿರುವ ಆದೇಶ ಇಷ್ಟು ದಿನ ವಿವಾದ ಸೃಷ್ಟಿಸಿ ಜನರ ದಿಕ್ಕು ತಪ್ಪಿಸಲು ಯತ್ನಿಸಿದವರಿಗೆ ಸ್ಪಷ್ಟ ಸಂದೇಶವಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಸದಾ ಹಿಂದೂ ಧರ್ಮದ ಆಚರಣೆಗಳಿಗೆ ಮಾತ್ರ ನಿರ್ಬಂಧಗಳನ್ನು ಹೇರುವ ಮೂಲಕ ಗಣೇಶೋತ್ಸವದ ವಿಚಾರದಲ್ಲಿ ವಿನಾಕಾರಣ ಗೊಂದಲ ಸೃಷ್ಟಿಸಿತ್ತು. ಈ ಹಿಂದಿನಂತೆ ಗಣೇಶೋತ್ಸವ ನಡೆಸುವ ಬಗ್ಗೆ ಬಂದಿರುವ ಆದೇಶವು ಇಡೀ ಹಿಂದೂ ಸಮಾಜದ ಹೋರಾಟಕ್ಕೆ ಸಿಕ್ಕಿರುವ ಗೆಲುವಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿದ್ದ ಗಣೇಶೋತ್ಸವವನ್ನೇ ನಿಲ್ಲಿಸುವ ಹುನ್ನಾರದ ಭಾಗವಾಗಿ ಇಲ್ಲ ಸಲ್ಲದ ಗೊಂದಲ ಸೃಷ್ಟಿಸಿ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಹಿಂದೂ ಸಮಾಜದ ತೀವ್ರ ವಿರೋಧ ಹಾಗೂ ಪ್ರತಿಭಟನೆಗೆ ಮಣಿದು ಕೊನೆಗೂ ಇದೀಗ ಬಂದಿರುವ ಆದೇಶದಂತೆ ವಿಶ್ವವಿದ್ಯಾನಿಲಯದ ಕುಲಪತಿಗಳು ಈ ಹಿಂದಿನಂತೆ ಮಂಗಳಾ ಸಭಾಂಗಣದಲ್ಲಿಯೇ ಗಣೇಶೋತ್ಸವ ಆಚರಿಸುತ್ತೇವೆಂದು ನಿರ್ಣಯಿಸಿದ್ದಾರೆ. ಹಿಂದೂ ಸಮಾಜದ ಧಾರ್ಮಿಕ ಆಚರಣೆಗಳಿಗೆ ಅಡ್ಡಿ ಉಂಟಾದಾಗ ಬಿಜೆಪಿ ಸದಾ ಹೋರಾಟಕ್ಕೆ ಸಿದ್ಧವಾಗಿರುತ್ತದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.