ಮಹಾಗಾಂವ್ ಕ್ರಾಸ್ ಪಿಕೆಪಿಎಸ್‌ನಲ್ಲಿ ಬಿತ್ತನೆ ಬೀಜ ಖರೀದಿಗೆ ಮುಗಿಬಿದ್ದಿರುವ ರೈತರು. 
ಜಿಲ್ಲೆ

ಬಿತ್ತನೆ ಬೀಜಕ್ಕಾಗಿ ರೈತರ ನೂಕುನುಗ್ಗಲು

ಕಮಲಾಪುರ: ಮುಂಗಾರು ಮಳೆ ಭರ್ಜರಿ ಎಂಟ್ರಿ ಕೊಟ್ಟಿದರಿಂದ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಕ್ಕಾಗಿ ರೈತರ ನೂಕುನುಗ್ಗಲು ಕಾಣಲಾರಂಭಿಸಿದೆ.

ಹಲವಾರು ಬಾರಿ ರೋಹಿಣಿ ಮಳೆ ಕೈಕೊಟ್ಟಿದರಿಂದ ಕೃಷಿ ಚಟುವಟಿಕೆ ಆರಂಭ ವಿಳಂಬವಾಗುತಿತ್ತು, ಆದರೀಗ ರೋಹಿಣಿ ಮಳೆ ತಾಲೂಕಿನ ವ್ಯಾಪ್ತಿಯಲ್ಲಿ ಸುರಿದಿದ್ದು, ಬುಧವಾರ ಸಂಜೆ ಕಮಲಾಪುರದಲ್ಲಿ ೧೧.೨ ಮಿಮೀ, ಮಹಾಗಾಂವ್ ಡ್ಯಾಮ್ ೮ ಮಿಮೀ ಮತ್ತು ಮಹಾಗಾಂವ್ ಕ್ರಾಸ್‌ನಲ್ಲಿ ೨೩.೩ ಮಿಮೀ ಮಳೆಯಾಗಿದೆ.

ನಿಗದಿತ ಸಮಯಕ್ಕೆ ರೋಹಿಣಿ ಬಂದರೆ ಓಣಿ ಓಣಿಯಲ್ಲೂ ದಾಣಿ ಎಂಬ ಗಾದೆಯಂತೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿತ್ತನೆಗಾಗಿ ಜಮೀನು ಹದಗೊಳಿಸಿರುವ ರೈತರು ಹೆಸರು, ಉದ್ದು, ಸೋಯಾಬೀನ್, ಎಳ್ಳು, ತೊಗರಿ ಮತ್ತಿತರ ಬೀಜಗಳಿಗಾಗಿ ನಾ ಮುಂದು ತಾ ಮುಂದು ಎಂದು ಬಡಿದಾಡುತ್ತಿದ್ದಾರೆ.

ಮಹಾಗಾಂವ್ ಕ್ರಾಸ್‌ನ ಪಿಕೆಪಿಎಸ್‌ನಲ್ಲಿ ೨೫ ಟನ್ ರಸಗೊಬ್ಬರ ಮಾರಾಟವಾಗಿ ನಾಲ್ಕೈದು ದಿನಗಳಾಗಿದ್ದು, ಪಡೆಯದ ರೈತರು ಕೆಲ ದಿನಗಳಿಂದ ಅಲೆಯುತ್ತಿದ್ದಾರೆ. ಆದರೆ ಸ್ಟಾಕ್ ಬಂದಿಲ್ಲ. ದಿನೇದಿನೆ ಬೇಡಿಕೆ ಹೆಚ್ಚುತ್ತಿದೆ ಎಂದು ಕಾರ್ಯದರ್ಶಿ ಕಮಲಾ ಮಡಕಿ ತಿಳಿಸಿದ್ದಾರೆ. ಕಮಲಾಪುರ ಮತ್ತು ಮಹಾಗಾಂವ್ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿ ರೋಹಿಣಿ ಮಳೆ ಸುರಿದಿದ್ದರಿಂದ ಎಲ್ಲ ರೈತರು ಒಟ್ಟಿಗೆ ಬಿತ್ತನೆ ಬೀಜ ಖರೀದಿಗೆ ಆಗಮಿಸುತ್ತಿದ್ದರಿಂದ ನೂಕುನುಗ್ಗಲು ಉಂಟಾಗುತ್ತಿದೆ. ಟೋಕನ್ ನೀಡಿ ಪ್ರತಿದಿನ ೭೦-೮೦ ರೈತರಿಗೆ ಬೀಜ ವಿತರಣೆ ಮಾಡಲಾಗುತ್ತಿದೆ.
| ಚಂದ್ರಕಾAತ ಜೀವಣಗಿ ಸಹಾಯಕ ಕೃಷಿ ನಿರ್ದೇಶಕ