ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಅಧಿಕೃತ ಘೋಷಣೆ ಹೊರಬಿದ್ದಿದ್ದು, ಅಧ್ಯಕ್ಷರಾಗಿ ಎ. ಗಜೇಂದ್ರ ಹಾಗೂ ಉಪಾಧ್ಯಕ್ಷರಾಗಿ ನಾಗರಾಜ್ ಮಂಗಳವಾರ ಅಧಿಕಾರ ಸ್ವೀಕರಿಸಿದರು. ಸೆ.12ರಂದು ಎರಡೂ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನ್ಯಾಯಾಲಯದಲ್ಲಿ ಪ್ರಕರಣವಿದ್ದ ಕಾರಣ ನ್ಯಾಯಾಧೀಶರ ಆದೇಶದ ಹಿನ್ನೆಲೆಯಲ್ಲಿ ಲಿತಾಂಶ ಘೋಷಿಸಿರಲಿಲ್ಲ. ಈಗ ನ್ಯಾಯಾಲಯದಲ್ಲಿನ ಅರ್ಜಿ ಹಿಂಪಡೆದು, ವಿವಾದ ಇತ್ಯರ್ಥಗೊಂಡಿದ್ದು, ಚುನಾವಣಾಧಿಕಾರಿ ಅಶ್ವಿನ್ ಅಧಿಕೃತ ಲಿತಾಂಶ ಘೋಷಿಸಿದರು.
ಅಧಿಕಾರ ಸ್ವೀಕಾರ: ನಗರಸಭೆ ಕಚೇರಿ ಸಭಾಂಗಣದಲ್ಲಿ ಸಂಸದ ಡಾ. ಕೆ.ಸುಧಾಕರ್ ಸಮ್ಮುಖದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದರು. ಇಬ್ಬರೂ ಸಂಸದರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ವಿ.ಮಂಜುನಾಥ್, ಎಂ.ಮುನಿಕೃಷ್ಣ ಮತ್ತಿತರರು ಇದ್ದರು.
ಬಗೆಹರಿದ ವಿವಾದ ಪ್ರಕರಣ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಮತದಾರ ಪಟ್ಟಿಗೆ ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್ ಮತ್ತು ಎಂ.ಆರ್. ಸೀತಾರಾಂ ಅವರ ಹೆಸರು ಸೇರಿಸಿರುವುದನ್ನು ಪ್ರಶ್ನಿಸಿ ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ್ ರೆಡ್ಡಿ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಇದರಿಂದ ಚುನಾವಣಾ ಫಲಿತಾಂಶ ಘೋಷಣೆಯಾಯಿತು.
ಅಭಿವೃದ್ಧಿಗೆ ಆದ್ಯತೆ: ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಿಳಿಸಿದರು. ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಸಭೆ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ಗಜೇಂದ್ರ, ಚುನಾವಣೆಯಲ್ಲಿ ವಿಶ್ವಾಸವಿಟ್ಟು ಸದಸ್ಯರು ಆಯ್ಕೆ ಮಾಡಿದ್ದು, ಉತ್ತಮ ಕಾರ್ಯ ನಿರ್ವಹಣೆ ಮೂಲಕ ಮೆಚ್ಚುಗೆ ಪಡೆಯಲು ಶ್ರಮಿಸಲಾಗುವುದು ಎಂದು ತಿಳಿಸಿದರು. ಉಪಾಧ್ಯಕ್ಷ ನಾಗರಾಜ್ ಮಾತನಾಡಿ, ಇತ್ತೀಚೆಗೆ ಶಾಸಕ ಪ್ರದೀಪ್ ಈಶ್ವರ್ ನಗರಸಭೆಯಲ್ಲಿ ಅಧಿಕಾರಿಗಳ ಗೌಪ್ಯ ಸಭೆ ನಡೆಸಿ, ಎಚ್ಚರಿಕೆ ನೀಡಿರುವ ಮಾಹಿತಿ ಇದೆ. ಇಲ್ಲಿ ಯಾರೇ ಆದರೂ ನಿಯಮಾನುಸಾರ ಕೆಲಸ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಯಾರಿಗೂ ಭಯ ಬೀಳುವ ಅವಶ್ಯಕತೆ ಇಲ್ಲ ಎಂದರು. ಅಭಿವೃದ್ಧಿಯಲ್ಲಿ ರಾಜಕೀಯ ಬಿಡಬೇಕು. ಇಲ್ಲಿನ ನಗರಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ತೀರ್ಮಾನವು ಮುಖ್ಯವಾಗಿರುತ್ತದೆ. ಇತರರ ಹಸ್ತಕ್ಷೇಪದಿಂದ ಯಾರನ್ನೂ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಶಾಸಕರ ವಿರುದ್ಧ ಕಿಡಿಕಾರಿದರು.
ಬಿಜೆಪಿ ಗೆಲುವು
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ಎ.ಗಜೇಂದ್ರ 19 ಮತ ಪಡೆದು ವಿಜೇತರಾಗಿದ್ದರೆ, ಕಾಂಗ್ರೆಸ್ ಬೆಂಬಲಿತ ಅಂಬರೀಶ್ 16 ಮತ ಪಡೆದು ಪರಾಭವಗೊಂಡಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿಜೆಪಿ ಬೆಂಬಲಿತ ನಾಗರಾಜ್ 19 ಮತ ಪಡೆದು ಗೆಲುವು ದಾಖಲಿಸಿದರೆ, ಕಾಂಗ್ರೆಸ್ ಬೆಂಬಲಿತ ಮೀನಾಕ್ಷಿ ಮಿಲ್ಟನ್ ವೆಂಕಟೇಶ್ 15 ಮತ ಪಡೆದು ಸೋತಿದ್ದಾರೆ. ಫಲಿತಾಂಶ ಅಧಿಕೃತವಾಗಿ ಘೋಷಣೆ ಆಗುತ್ತಿದ್ದಂತೆ ವಿಜೇತರ ಬೆಂಬಲಿಗರು ನಗರಸಭೆ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.