ಜಿಲ್ಲೆ

ಕಮಲಾ ಹಂಪನಾ ಎಲ್ಲರಿಗೂ ಮಾದರಿ

ಪಂಕಜ ಕೆ.ಎಂ.

ಬೆಂಗಳೂರು: ಎಲ್ಲರಲ್ಲೂ ಬ್ರಾಹ್ಮಣ್ಯವಿದೆ ಅದಕ್ಕಾಗಿ ನಾವು ಬ್ರಾಹ್ಮಣ್ಯವನ್ನು ವಿರೋಧಿಸುತ್ತೇವೆ ಎಂದು ಬಿ.ಟಿ. ಲಲಿತಾ ನಾಯಕ್ ಹೇಳಿದ್ದಾರೆ.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಆಯೋಜಿಸಿದ್ದ ಹಿರಿಯ ಸಾಹಿತಿ ನಾಡೋಜ ಡಾ. ಕಮಲಾ ಹಂಪನಾ, ಡಾ.ಖಲೀಲ್ ಉರ್ ರೆಹಮಾನ್, ಲಕ್ಕೂರು ಆನಂದ ಅವರ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮುಸ್ಲಿಂರಲ್ಲೂ ಧರ್ಮಾಂಧರಿದ್ದಾರೆ. ಒಳ್ಳೆಯವರೂ ಇದ್ದಾರೆ. ಮುಸ್ಲಿಂ ಸಾಹಿತಿಗಳು ಉರ್ದು ಸಾಹಿತ್ಯವನ್ನೂ ಕನ್ನಡಕ್ಕೆ ಅನುವಾದಿಸುವ ಮೂಲಕ ಅನೇಕ ಕೊಡುಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ಡಾ. ಖಲೀಲ್ ಉರ್ ರೆಹಮಾನ್ ಅನೇಕ ಕೆಲಸವನ್ನು ಮಾಡಿದ್ದಾರೆ. ಇನ್ನು ಕಮಲಾ ಹಂಪನಾ ವಯಸ್ಸಿನಲ್ಲಿ ದೊಡ್ಡವರಾಗಿದ್ದರೂ, ನನಗೆ ಸ್ನೇಹಿತೆಯಂತೆ ಇದ್ದರು ಎಂದರು.

ಶರಣರ ಸಾವು ಮರಣದಲ್ಲಿ ನೋಡು ಎಂಬಂತೆ ಕಮಲಾ ಹಂಪನಾ ದೇಹ ದಾನ ಮಾಡಿ ಎಲ್ಲರಗೂ ಮಾದರಿಯಾಗಿದ್ದಾರೆ. ಕವಿಗೋಷ್ಟಿಗಳಲ್ಲಿ ಮಾತ್ರ ಸಿಗುತ್ತಿದ್ದ ಲಕ್ಕೂರು ಆನಂದ, ಸಿಕ್ಕಾಗಲೆಲ್ಲ ಗುಡ್ ಮಾರ್ನಿಂಗ್ ಹೇಳುತ್ತಿದ್ದರು. ಈಗಲೂ ಲಕ್ಕೂರು ಆನಂದ ಎಂದಾಕ್ಷಣ ನನಗೆ ಗುಡ್ ಮಾರ್ನಿಂಗ್ ನೆನಪಾಗುತ್ತದೆ ಎಂದು ಸ್ಮರಿಸಿದರು.

ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಹಿಂದುಳಿದ ವರ್ಗದವರು ಸಿಕ್ಕ ಅವಕಾಶಗಳಿಂದ ವಂಚಿತರಾಗುತ್ತಾರಲ್ಲ ಎನ್ನುವ ನೋವು ಕಮಲಾ ಹಂಪನಾ ಅವರಿಗಿತ್ತು. ಅವರ ಕುಟುಂಬ ಒಂದು ರೀತಿ ಬಹುತ್ವದ ಕುಟುಂಬವಾಗಿತ್ತು. ಒಂದು ಜಾತಿ ಒಂದು ಧರ್ಮಕ್ಕೆ ಸೇರಿದವರಾಗಿರಲಿಲ್ಲ. ಖಲೀಲ್ ಉರ್ ರೆಹಮಾನ್ ಅವರನ್ನು ಅನೇಕ ಬಾರಿ ಭೇಟಿಯಾಗಿದ್ದೇನೆ. ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವಾಗಲಿಲ್ಲ ಎನ್ನುವ ನೋವಿದೆ ಎಂದು ಹೇಳಿದರು.

ಕೋಟ್

ಹಿಂದೆ ಕರ್ನಾಟಕ ಸಾಹಿತ್ಯ ಅಕಾಡಮಿ ವ್ಯಾಪ್ತಿಯೊಳಗೆ ಎಲ್ಲ ಭಾಷೆಗಳು ಬರುತ್ತಿದ್ದವು. ಈಗ ಬೇರೆ ಬೇರೆ ಅಕಾಡಮಿಗಳಿವೆ. ಆದರೂ ಪ್ರತ್ಯೇಕತೆ ಸಾಧಿಸುವುಸದು ಸರಿಯಲ್ಲ.

ಎಲ್.ಎನ್. ಮುಕುಂದರಾಜ್, ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡಮಿ