ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಹೇಳಿರುವ ತಮಿಳು ಚಿತ್ರನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿದರು. 
ಜಿಲ್ಲೆ

ಕಮಲ್ ಹಾಸನ್ ಹೇಳಿಕೆ ಖಂಡನೀಯ

ರವಿಕುಮಾರ್ ಪಿ. ಕೆ

ಬೇಲೂರು: ಕನ್ನಡ ತಮಿಳಿನಿಂದ ಹುಟ್ಟಿದ್ದು ಎನ್ನುವ ಮೂಲಕ ಕನ್ನಡಿಗರ ಸ್ವಾಭಿಮಾನವನ್ನು ಕೆಣಕಿದ ತಮಿಳು ಚಿತ್ರನಟ ಕಮಲ್ ಹಾಸನ್ ನಡೆ ಖಂಡನೀಯ ಎಂದು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ಎಸ್.ಎಂ.ರಾಜು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಕಮಲ್ ಹಾಸನ್ ವಿರುದ್ಧ ಶನಿವಾರ ಪ್ರತಿಭಟಿಸಿ ಮಾತನಾಡಿದ ಅವರು, ತಮಿಳು ಚಿತ್ರನಟ ಕಮಲ್ ಹಾಸನ್ ಚಲನಚಿತ್ರವೊಂದರ ಧ್ವನಿ ಸುರುಳಿ ಬಿಡುಗಡೆ ಸಂದರ್ಭ ಕನ್ನಡ ತಮಿಳಿನಿಂದ ಹುಟ್ಟಿದೆ ಎಂದು ಹೇಳುವ ಮೂಲಕ ಕನ್ನಡಿಗರಾದ ನಮಗೆ ನೋವುಂಟು ಮಾಡಿದ್ದಾರೆ. ನಮ್ಮ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಕಮಲ್ ಹಾಸನ್ ತಮಿಳಿಗರನ್ನು ಓಲೈಸುವುದಕ್ಕಾಗಿ ಈ ರೀತಿ ಹೇಳಿರುವುದು ತಪ್ಪು ಎಂದು ಕಿಡಿಕಾರಿದರು.

ಈ ರೀತಿ ಕನ್ನಡದ ಬಗ್ಗೆ ಮಾತನಾಡಿ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ದ್ರೋಹವೆಸಗಿರುವುದರಿಂದ ಮೊದಲು ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ರಾಜ್ಯದಲ್ಲಿ ಕಮಲ್ ಹಾಸನ್‌ನ ಥಗ್ ಲೈಫ್ ಚಿತ್ರವನ್ನು ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅವಕಾಶ ಕೊಡಬಾರದು. ಮತ್ತು ಕಮಲ್ ಹಾಸನ್‌ನ ಎಲ್ಲ ಚಿತ್ರಗಳನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಬೇಕು. ಜತೆಗೆ ಕನ್ನಡದ ಬಗ್ಗೆ ಇಲ್ಲ ಸಲ್ಲದ್ದನ್ನು ಮಾತನಾಡುವವರಿಗೆ ಇದು ತಕ್ಕ ಪಾಠವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು. ಅಕಸ್ಮಾತ್ ಚಿತ್ರ ಬಿಡುಗಡೆಗೆ ಮುಂದಾದರೆ ಸಂಘಟನೆಯಿಂದ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಯಕರ್ನಾಟಕ ಸಂಘಟನೆ ತಾಲೂಕು ಕಾರ್ಯಾಧ್ಯಕ್ಷ ಲಕ್ಷ್ಮಣ್, ಉಪಾಧ್ಯಕ್ಷ ಗುರುಮೂರ್ತಿ, ಆಟೋ ಘಟಕದ ಅಧ್ಯಕ್ಷ ಲಕ್ಷ್ಮಣ್, ಮುಖಂಡರಾದ ವಿನಯ್, ಸತೀಶ್, ಬೆಟ್ಟ, ಚಂದನ್, ಸುರೇಶ್, ಬಂಡೆ ಮಂಜುನಾಥ್, ಹರೀಶ್, ಧರ್ಮೇಗೌಡ, ಮಧು, ಗುರುದತ್, ದರ್ಶನ್ ಸೇರಿದಂತೆ ಇತರರಿದ್ದರು.