ನೆಲಮಂಗಲ: ಧಾರ್ಮಿಕ ಆಚರಣೆಗಳಿಂದ ಮನುಕುಲದ ಜನತೆ ಸುಭಿಕ್ಷವಾಗಿರಬಹುದು ಎಂದು ದಾಸನಪುರ ಉಭಯ ವೇದಾಂತ ವೈಷ್ಣವ ಸಭಾ ಉಪಾಧ್ಯಕ್ಷ ರಂಗಾಚಾರ್ ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ದಾಸನಪುರದ ಶ್ರೀದೇವಿ ಭೂದೇವಿ ಸಮೇತ ರಂಗನಾಥ ದೇವಾಲಯದ 8ನೇ ವಾರ್ಷಿಕೋತ್ಸವ ಹಾಗೂ ತಿರುಕಲ್ಯಾಣೋತ್ಸವದಲ್ಲಿ ಮಾತನಾಡಿದರು.
ಗ್ರಾಮದ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಜಗತ್ತನ್ನು ರಕ್ಷಿಸುತ್ತಿರುವ ಶ್ರೀ ಹರಿಯ ಅವತಾರವಾಗಿರುವ ರಂಗನಾಥಸ್ವಾಮಿಗೆ ಶ್ರೀದೇವಿ ಭೂದೇವಿ ಅವರೊಂದಿಗೆ ವಿವಾಹ ನೆರವೇರಿಸಲಾಗಿದೆ ಎಂದರು.
ನಾಗರಿಕತೆಯ ಕಾಲದಿಂದಲೂ ದೇವರ ಆರಾಧನೆ ಮಾಡಿಕೊಂಡು ಬರಲಾಗುತ್ತಿದೆ. ನಮ್ಮ ಪೂರ್ವಜರು ಪರಿಚಯಿಸಿರುವ ದೇವಾಲಯಗಳ ಪರಿಕಲ್ಪನೆಯನ್ನು ಆಧುನಿಕತೆಯ ದಿನಗಳಲ್ಲೂ ಮುಂದುವರಿಸಿಕೊಂಡು ಬರುತ್ತಿರುವುದು ನೆಮ್ಮದಿಯಿಂದ ಬದುಕುವಂತಾಗಿದೆ ಎಂದು ತಿಳಿಸಿದರು.
ನಕಾರಾತ್ಮಕತೆ ತುಂಬಿರುವ ಸಮಾಜದಲ್ಲಿ ಸಕಾರಾತ್ಮಕವಾಗಿ ಚಿಂತಿಸಲು ದೇವಾಲಯಗಳು ಸಹಕಾರಿಯಾಗಿವೆ. ದೇವಾಲಯ ನಿರ್ಮಾಣ ಮಾಡುವುದು ಸುಲಭ. ಆದರೆ ಅದರ ನಿರ್ವಹಣೆ ಸುಲಭವಲ್ಲ. ದೇವಾಲಯದ ವಾರ್ಷಿಕೋತ್ಸವ ಹೆಸರಿನಲ್ಲಿ ಗ್ರಾಮಸ್ಥರಲ್ಲಿ ಪರಸ್ಪರ ಸಾಮರಸ್ಯ, ಸ್ನೇಹ ಸೌಹಾದರ್ ವೃದ್ಧಿಸುತ್ತಿರುವ ಗ್ರಾಮಸ್ಥರ ಕಾರ್ಯ ಎಲ್ಲರಿಗೂ ಮಾದರಿ ಎಂದರು.
ವಾರ್ಷಿಕೋತ್ಸವದ ಸಂಭ್ರಮಾಚರಣೆಯ ಜತೆಗೆ ಲೋಕಕಲ್ಯಾಣರ್ಥವಾಗಿ ತಿರುಕಲ್ಯಾಣ ಕಾರ್ಯಕ್ರಮ ಆಯೋಜಿಸಲಾಗಿದೆ. ದೇವಾಲಯಕ್ಕಿರುವ ಅನೇಕಗ್ರಾಮಗಳ ಭಕ್ತರು ಸಹಕಾರ ನೀಡಿದ್ದಾರೆ. ಕಲ್ಯಾಣೋತ್ಸವದಲ್ಲಿ ಸಮೃದ್ಧಿಯಾಗಿ ಮಳೆ ಬೆಳೆಯಾಗಿ ದೇಶ ಸುಭಿಕ್ಷೆಯಿಂದ ಕೂಡಿರಲೆಂದು ಪ್ರಾರ್ಥಿಸಿರುವುದಾಗಿ ದೇವಾಲಯ ಸಮಿತಿ ಅಧ್ಯಕ್ಷ ಆರ್.ಲಕ್ಷ್ಮಣ್‌ಮೂರ್ತಿ ತಿಳಿಸಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮಗಳು: ದೇವಾಲಯದ ವಾರ್ಷಿಕೋತ್ಸವದ ಪ್ರಯುಕ್ತ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕಲ್ಯಾಣೋತ್ಸವ, ಲಾಜಹೋಮ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಪೂರ್ಣಾಹುತಿ, ಸುಮಂಗಲಿಯರಿಂದ ಕುಂಕುಮಾರ್ಚನೆ, ನಿವೇದನೆ, ಅಷ್ಟಾವಧಾನಸೇವೆ, ರಾಷ್ಟ್ರಾಶೀರ್ವಾದ, ಮಹಾಪೂರ್ಣಾಹುತಿ, ಮಹಾಮಂಗಳಾರತಿ ಆಯೋಜಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಮಂಗಳವಾರ ಸಂಜೆ ಗೋಧೂಳಿ ಲಗ್ನದಲ್ಲಿ ದೇವರ ಉಯ್ಯಲೋತ್ಸವ ಆಯೋಜಿಸಲಾಗಿದೆ.
ಮೇಲುಕೋಟೆ ಯದುಗಿರಿ ಯತಿರಾಜಮಠದ ಶ್ರೀ ಯದುಗಿರಿ ಯತಿರಾಜನಾರಾಯಣ ರಾಮಾನುಜ ಜೀಯರ್ , ದಾಸನಪುರ ಗ್ರಾಪಂ ಅಧ್ಯಕ್ಷೆ ಮಾಲಾ, ದೇವಾಲಯ ಸಮಿತಿ ಗೌರವಾಧ್ಯಕ್ಷ ಎಲ್.ರಾಮಕೃಷ್ಣಪ್ಪ, ಉಪಾಧ್ಯಕ್ಷ ಬಿ.ದತ್ತಾತ್ರೇಯ, ಕಾರ್ಯದರ್ಶಿ ಎಸ್.ಎ.ನಾರಾಯಣ, ಸಹಕಾರ್ಯದರ್ಶಿ ಮಧುಸೂಧನ, ಖಜಾಂಚಿ ಡಿ.ಆರ್.ಮಂಜುನಾಥ್, ಪ್ರಧಾನ ಅರ್ಚಕ ಸಂಜೀವಾಚಾರ್ಯ, ಕೃಷ್ಣಮೂರ್ತಿ, ಕಾರ್ಯಕಾರಿ ಸಮಿತಿ ಸದಸ್ಯ ಅಪ್ಪೇಗೌಡ, ಗಂಗರಾಜು, ವಿ.ವೆಂಕಟೇಶ್, ಹನುಮಂತರಾಯಪ್ಪ, ಶಿವಣ್ಣ, ಜಗದೀಶ್, ಪುಟ್ಟರಾಜು, ಮೂರ್ತಿ, ಮಾರೇಗೌಡ, ಕುಮಾರ್, ಗಿರೀಶ್, ನಾಗರಾಜು, ರವಿಕುಮಾರ್, ಮತ್ತಿತರರು ಇದ್ದರು.