ಸಿಂಧನೂರು: ಕಲ್ಯಾಣ ಕರ್ನಾಟಕ ಭಾಗದ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಆಸ್ಪತ್ರೆಗಳ ಕಟ್ಟಡ ಸೇರಿ ಮೂಲಸೌಲಭ್ಯ ಒದಗಿಸಲು 850 ಕೋಟಿ ರೂ. ವಿಶೇಷ ಅನುದಾನ ನೀಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಶನಿವಾರ ಆಯೋಜಿಸಿದ್ದ ತಾಯಿ-ಮಕ್ಕಳ ಆಸ್ಪತ್ರೆ, ಜಿಟಿಟಿಸಿ ತರಬೇತಿ ಕೇಂದ್ರ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಸಮರ್ಪಕ ಅನುಷ್ಠಾನಗೊಳಿಸಲಾಗಿದೆ. ನೇರವಾಗಿ ಫಲಾನುಭವಿಗಳಿಗೆ ಸೌಲಭ್ಯ ಸಿಗಬೇಕೆಂಬ ಸಿಎಂ ಉದ್ದೇಶ ಈಡೇರಿದೆ. ಗ್ಯಾರಂಟಿ ಯೋಜನೆ ಇತರ ರಾಜ್ಯಗಳಿಗೆ ಮಾದರಿಯಾಗಿದೆ. ಆದರೆ, ಬಿಜೆಪಿ ನಾಯಕರು ರಾಜ್ಯದ ಅಭಿವೃದ್ಧಿ ಸಹಿಸದೆ ಆರೋಪ ಮಾಡುತ್ತಿದ್ದಾರೆ ಎಂದ ಅವರು, ಹೊಸ ಆರೋಗ್ಯ ಕೇಂದ್ರ, ಜಿಟಿಆರ್‌ಟಿಸಿ ಕೇಂದ್ರ ಆರಂಭಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ ಕೇಂದ್ರ ಕೊರತೆ ನೀಗಿಸಿದ್ದೇವೆ. ಆರೋಗ್ಯ ಆವಿಷ್ಕಾರಗಳನ್ನು ಅನುಷ್ಠಾನಗೊಳಿಸಿದ್ದೇವೆ. ಕಲ್ಯಾಣ ಕರ್ನಾಟಕ ಭಾಗಕ್ಕೆ 850 ಕೋಟಿ ರೂ. ಅನುದಾನ ನೀಡಿ, ಆರೋಗ್ಯ ಸುಧಾರಣೆಗೆ ಆದ್ಯತೆ ನೀಡಿದ್ದೇವೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 16 ಹೊಸ ಆಸ್ಪತ್ರೆಗಳ ಕಟ್ಟಡ ನಿರ್ಮಾಣವಾಗುತ್ತಿವೆ. ಲಿಂಗಸುಗೂರಿನಲ್ಲಿ 20 ಕೋಟಿ ರೂ. ವೆಚ್ಚದ ಕ್ರಿಟಿಕಲ್ ಕೇರ್ ಸೆಂಟರ್ ಮಂಜೂರು ಮಾಡಲಾಗಿದೆ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕರ್ನಾಟಕ ಕಟ್ಟುತ್ತಿದೆ. ಕೇಂದ್ರ ಈಗ ಕೇವಲ 13 ಪೈಸೆಯಷ್ಟು ಅನುದಾನ ನೀಡುತ್ತಿದೆ. ಬರಗಾಲದ ಹಣ ಕೂಡ ಕೊಡಲಿಲ್ಲ. ಕೋರ್ಟ್ ಮೂಲಕ ಹಣ ಪಡೆಯಬೇಕಾಯ್ತು. ನಮಗೆ ಕೇಂದ್ರದಿಂದ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಸರ್ಕಾರ ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದಿದೆ. ಸಿಂಧನೂರಿಗೆ 73 ಕೋಟಿ ರೂ. ವೆಚ್ಚದ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ ಮಂಜೂರು ಮಾಡಲಾಗಿದೆ. ಇಲ್ಲಿ ಓದಿದವರಿಗೆ ಉದ್ಯೋಗ ಗ್ಯಾರಂಟಿ ಸಿಗಲಿದೆ. ಮೂರು ಕೋರ್ಸ್ ಆರಂಭಿಸಲಿದ್ದು, ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ನೇರವಾಗಿ ಉದ್ಯೋಗಕ್ಕೆ ಹೋಗಲಿದ್ದಾರೆ. ಐಟಿಐ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳಲ್ಲಿ ಶೇ.40 ಜನರಿಗೆ ನೌಕರಿ ಸಿಗುತ್ತಿದೆ. ಜಿಲ್ಲೆಯಲ್ಲಿ ಎರಡು ಜಿಟಿಆರ್‌ಟಿಸಿ ಕೇಂದ್ರ ಆರಂಭಿಸಲಿದ್ದೇವೆ. ರಾಜ್ಯದ 30 ಕೇಂದ್ರದಲ್ಲಿ 6 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಯುವನಿಧಿಗೆ ಮೂರು ಲಕ್ಷ ನಿರುದ್ಯೋಗಿಗಳು ನೋಂದಾಯಿಸಿದ್ದಾರೆ. ಭವಿಷ್ಯದ ಉದ್ದೇಶದಿಂದ ಅವರಿಗೆ ಉದ್ಯೋಗದ ಅವಕಾಶ ಕಲ್ಪಿಸುವ ಆಲೋಚನೆ ಹೊಂದಿರುವೆವು. ಜನಗಣತಿ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕೋರಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಬಹು ವರ್ಷಗಳ ನಂತರ ಜಿಲ್ಲೆಯಲ್ಲಿ ಅತಿವೃಷ್ಟಿ ಹೆಚ್ಚಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು. ಅತಿವೃಷ್ಟಿ ಪ್ರದೇಶವೆಂದು ಘೋಷಿಸಬೇಕು. ರಸ್ತೆಗಳು ಹಾಳಾಗಿದ್ದು ದುರಸ್ತಿಗೆ ಅನುದಾನ ಬಿಡುಗಡೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ತಜ್ಞ ವೈದ್ಯರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.
ಶಾಸಕರಾದ ಬಸನಗೌಡ ಬಾದರ್ಲಿ, ಆರ್.ಬಸನಗೌಡ ತುರ್ವಿಹಾಳ, ಎಂಎಲ್ಸಿಗಳಾದ ಶರಣೇಗೌಡ ಬಯ್ಯಪುರ, ಎ.ವಸಂತಕುಮಾರ, ಸುಡಾ ಅಧ್ಯಕ್ಷ ಬಾಬುಗೌಡ ಬಾದರ್ಲಿ, ಜಿಲ್ಲಾಧಿಕಾರಿ ನಿತೀಶ ಕೆ., ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ, ಎಸ್ಪಿ ಪುಟ್ಟಮಾದಯ್ಯ ಇದ್ದರು. ಡಾ.ಎಸ್.ಶಿವರಾಜ ನಿರೂಪಿಸಿದರು.