ಮದ್ದೂರು: ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆ ಹಾಕುವುದೊಂದೇ ಮಾರ್ಗ ಎಂದು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕಿ ರೂಪಾ ತಿಳಿಸಿದರು.
ತಾಲೂಕಿನ ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಶುಪಾಲನೆ ಮತ್ತು ಪಶು ಸಂಗೋಪನಾ ಇಲಾಖೆ, ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಎನ್‌ಎಡಿಸಿಪಿ ಯೋಜನೆಯಡಿ 3 ನೇ ಸುತ್ತಿನ ಕಾಲುಬಾಯಿ ಜ್ವರದ ಲಸಿಕಾ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆ ಎಷ್ಟೇ ಬಾರಿ ಜಾನುವಾರುಗಳಿಗೆ ಲಸಿಕೆ ಹಾಕಿಸಿದ್ದರೂ ಆರು ತಿಂಗಳಿಗೊಮ್ಮೆ ಕೈಗೊಳ್ಳುವ ಸಾಮೂಹಿಕ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಿ. ಜಾನುವಾರುಗಳಿಗೆ ರೋಗ ಬಾರದಂತೆ ನೋಡಿಕೊಳ್ಳಿ ಎಂದು ಅವರು ರೈತರಗೆ ಮನವಿ ಮಾಡಿದರು.
ಕಾಲು ಬಾಯಿ ಜ್ವರದ ಲಸಿಕೆ ಹಾಕಿಸಿದರೆ ಜಾನುವಾರುಗಳು ಹಾಲು ಕಡಿಮೆ ಕೊಡುತ್ತದೆ. ಗಂಟು ಆಗುತ್ತದೆ ಎಂಬ ಮೂಢ ನಂಬಿಕೆ ಸಲ್ಲದು. ರೈತರು ಈ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.
ಪಶು ಪಾಲನೆ ಮತ್ತು ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಬಿ.ಪ್ರವೀಣ್‌ಕುಮಾರ್ ಮಾತನಾಡಿ, ತಾಲೂಕಿನಲ್ಲಿರುವ ಜಾನುವಾರುಗಳಿಗೆ ನ.7 ರಿಂದ 29 ವರೆಗೆ ಉಚಿತವಾಗಿ ಲಸಿಕಾ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನಲ್ಲಿ 57,510 ಹಸುಗಳು ಮತ್ತು 18,150 ಎಮ್ಮೆಗಳಿವೆ. ಎಲ್ಲವೂ ಆರೋಗ್ಯವಂತವಾಗಿದ್ದರೆ ಕೃಷಿಕರಿಗೆ ಮತ್ತು ಹೈನುಗಾರರಿಗೆ ಸಂಪತ್ತು ಎಂದರು.
ಲಸಿಕಾ ಆಂದೋಲನಕ್ಕಾಗಿ 74 ಜನ ಲಸಿಕೆದಾರರನ್ನು, 37 ತಂಡಗಳಾಗಿ ನೇಮಿಸಲಾಗಿದೆ. ಪ್ರತಿ ತಂಡವೂ ನಿಗದಿತ ದಿನಾಂಕದಂದು ಆಯಾ ಹಳ್ಳಿಗಳಿಗೆ ಬೆಳಗ್ಗೆ 6ಕ್ಕೇ ತೆರಳಿ ಪ್ರತಿ ಮನೆಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಲಸಿಕೆ ಹಾಕಲಿದೆ. ರೈತರು ಇದಕ್ಕೆ ಸ್ಪಂದಿಸಬೇಕು ಎಂದರು.
ಪಶು ಪಾಲನೆ ಮತ್ತು ಪಶು ಸಂಗೋಪನಾ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ.ಸುರೇಶ್, ಗ್ರಾಪಂ ಅಧ್ಯಕ್ಷ ಜಿ.ಬಿ.ಶಂಕರೇಗೌಡ, ಜಿಲ್ಲಾ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಮಂಜೇಶ್, ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸುಕೇಶ, ಮುಖಂಡರಾದ ಬಿ.ಜೆ.ಉಮಾಶಂಕರ್, ರುಮಾನಾ, ಭವ್ಯಶ್ರೀ, ಶಶಿಕುಮಾರ್, ಶಿವಕುಮಾರ್ ಇತರರು ಇದ್ದರು.