ಜಿಲ್ಲೆ

ಪ್ರತಿಭೆ ಅನಾವರಣಕ್ಕೆ ಕಲೋತ್ಸವ ಸಹಕಾರಿ

ವೀರೇಶ ಸೌದ್ರಿ

ಧಾರವಾಡ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ, ಸಮೂಹ ಸಂಪನ್ಮೂಲ ಕೇಂದ್ರ ವತಿಯಿಂದ ಇಲ್ಲಿನ ಪವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವವು ಗುರುವಾರ ಜರುಗಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪವನ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷೆ ರತ್ನಾ ಪಾಟೀಲ ಮಾತನಾಡಿ, ಮಕ್ಕಳಲ್ಲಿನ ಅದಮ್ಯ ಕೌಶಲ ಹಾಗೂ ಪ್ರತಿಭೆಯನ್ನು ಕಲೋತ್ಸವವು ಅನಾವರಣಗೊಳಿಸಿ, ಉತ್ತಮ ಭವಿಷ್ಯ ರೂಪಿಸಲು ದಾರಿಯಾಗಿದೆ ಎಂದರು.

ಬಿಇಒ ಅಶೋಕ ಸಿಂದಗಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗೆ ಈ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ. ಎಲ್ಲ ಮಕ್ಕಳೂ ಕ್ರಿಯಾಶೀಲವಾಗಿ ಪಾಲ್ಗೊಂಡು ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಸಪ್ತಾಪುರ ಕ್ಲಸ್ಟರ್‌ನ 14 ಶಾಲೆ ಮಕ್ಕಳು ಕಿರಿಯ-ಹಿರಿಯ ವಿಭಾಗಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮುಖ್ಯ ಶಿಕ್ಷಣ ಸಂಯೋಜಕ ಮಂಜುನಾಥ ಅಡಿವೇರ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿದರು. ಪವನ ಆಂಗ್ಲ ಮಾಧ್ಯಮ ಶಾಲೆ ಪ್ರಾಂಶುಪಾಲ ವಿಕ್ರಂ ಮಹಶಬ್ದೆ, ಪ್ರವೀಣಾ ಬ್ಯಾಹಟ್ಟಿ, ಸವಿತಾ ಕಂಬಿ, ಇತರರು ಇದ್ದರು. ನವೀನ ನರಗುಂದ ನಿರೂಪಿಸಿದರು. ಶೋಭಾ ಕುಸುಗಲ್ ವಂದಿಸಿದರು.