ದೇವರು ನೀಡಿದ ಆಯುಷ್ಯಕ್ಕೆ ಜೀವ ತುಂಬುವ ಕಾರ್ಯವಾಗಬೇಕಾಗಿದೆ. ಉದ್ವೇಗದಿಂದ ಕೂಡಿದ ಮನುಷ್ಯನ ಜೀವನಕ್ಕೆ ನೆಮ್ಮದಿ ಸಿಗಲು ಕಲೆ ಸಂಗೀತ ಬೇಕು. ಕಲೋಪಾಸನಾ ಮನಸ್ಸಿಗೆ ಪುನಶ್ಚೇತನ ನೀಡುತ್ತದೆ ಎಂದು ಪಾಣಾಜೆ ಸಬೋಧ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಪಿ.ಕೃಷ್ಣ ಭಟ್ ಹೇಳಿದರು.
ಎಸ್‌ಡಿಪಿ ರೆಮಿಡೀಸ್ ಆಂಡ್ ರಿಸರ್ಚ್ ಸೆಂಟರ್(ಆಯುರ್ವೇದ ಔಷಧ ತಯಾರಕರು) ವತಿಯಿಂದ ಎಸ್‌ಡಿಪಿ ಚಾರಿಟೆಬಲ್ ಟ್ರಸ್ಟ್ ನೇತೃತ್ವದಲ್ಲಿ ಶನಿವಾರ ಶನಿವಾರ ಆಯೋಜಿಸಲಾದ ೨೧ನೇ ವರ್ಷದ ಕಲೋಪಾಸನಾ-೨೦೨೫ ಸಾಂಸ್ಕೃತಿಕ ಕಲಾ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಕಷ್ಟದಲ್ಲಿದ್ದರೂ, ದೈವಭಕ್ತಿ ಉತ್ತುಂಗಕ್ಕೇರಿಸುತ್ತದೆ. ಬದುಕು ಸುಂದರ, ಸುಮಧುರವಾದುದು. ಪರಿಶ್ರಮ ಇದ್ದಾಗ ಯಶಸ್ಸು ಸಾಧ್ಯ. ಬದುಕು ಯಜ್ಞವಾಗಿದ್ದು, ಸಾವು ಎಂಬುದು ಪೂರ್ಣಾಹುತಿಯಾಗಬೇಕು. ಬಾಳಿನ ಗುರಿಯನ್ನು ಅರಿತು ಬದುಕಬೇಕು ಎಂದು ಹೇಳಿದರು.
ಎಸ್‌ಡಿಪಿ ರೆಮಿಡೀಸ್ ಮತ್ತು ರಿಸರ್ಚ್ ಸೆಂಟರ್ ನಿರ್ದೇಶಕ ಡಾ.ಹರಿಕೃಷ್ಣ ಪಾಣಾಜೆ, ರೂಪಲೇಖ, ಮೇಘನಾ ಪಾಣಾಜೆ, ಡಾ. ಕೇದಾರಕೃಷ್ಣ ಪಾಣಾಜೆ, ಮನೇಕ್ ಕಿಶೋರ್, ಗೋಪಾಲ ಪಣಿಕ್ಕರ್, ಗೌರಿ ಪಣಿಕ್ಕರ್ ಉಪಸ್ಥಿತರಿದ್ದರು. ನಿವೃತ್ತ ಪ್ರಾಂಶುಪಾಲ ಮಾಧವ ಭಟ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಂಜನಿ-ಗಾಯತ್ರಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಿದರು. ವಯಲಿನ್‌ನಲ್ಲಿ ಎಲ್.ರಾಮಕೃಷ್ಣನ್, ಮೃದಂಗ ದಿಲ್ಲಿ ಸಾಯಿ ರಾಮ್, ಘಟಂ ವಝಿಪಿಲ್ಲಿ ಕೃಷ್ಣ ಕುಮಾರ್ ಭಾಗವಹಿಸಿದರು. ಭಾನುವಾರ ಸಂಜೆ ೬.೩೦ರಿಂದ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಮೇಳ ಶ್ರೀಕೃಷ್ಣ ಪಾರಿಜಾತ-ನರಕಾಸುರ ವಧೆ ಯಕ್ಷಗಾನ, ಫೆ.೨೪ರಂದು ಸಂಜೆ ೬.೩೦ರಿಂದ ಯಕ್ಷಗಾನ ಶ್ರೀ ಹನುಮಗಿರಿ ಮೇಳದಿಂದ ಸಾಕೇತ ಸಾಮ್ರಾಜ್ಞಿ ಪ್ರದರ್ಶನ ಇರಲಿದೆ.