ರಾಮನಗರ: ಮಂಡ್ಯ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಮಾಗಡಿ ಪೊಲೀಸರು ಸುಮಾರು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕಿತ್ತಗನೂರು ನಿವಾಸಿ, ಮೂಲತಃ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ದಿಡಗ ಗ್ರಾಮದ ಉದಯ್ ಕುಮಾರ್ ಅಲಿಯಾಸ್ ಅಶೋಕ (25) ಬಂಧಿತ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದರು.
ಮಾಗಡಿ ಠಾಣಾ ವ್ಯಾಪ್ತಿಯ ಹರ್ತಿ ಗ್ರಾಮದ ರೇಣುಕಯ್ಯ ಅವರ ಮನೆಯಲ್ಲಿ ಕಳವು ನಡೆದು ಸುಮಾರು 1.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿತ್ತು. ವೃತ್ತ ನಿರೀಕ್ಷಕ ಬಿ.ಎಸ್.ಮಂಜುನಾಥ್ ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ನಂತರ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಾಗಡಿಯ 2 ಪ್ರಕರಣ, ಮಂಡ್ಯ ಮತ್ತು ತುಮಕೂರಿನ 15 ಪ್ರಕರಣಗಳಲ್ಲಿ ಭಾಗಿಯಾಗಿರುವುದು ದೃಢಪಟ್ಟಿತ್ತು. ಬಂಧಿತನಿಂದ 560 ಗ್ರಾಂ ಚಿನ್ನ ಮತ್ತು 3 ಕೆ.ಜಿ. ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಇದರ ಒಟ್ಟು ಮೌಲ್ಯ ಸುಮಾರು 25 ಲಕ್ಷ ರೂ.ಗಳಾಗಿದೆ ಎಂದು ಅನೂಪ್‌ಶೆಟ್ಟಿ ಮಾಹಿತಿ ನೀಡಿದರು.
ಬೆಡ್‌ಶೀಟ್ ವ್ಯಾಪಾರಿಯಾದ ಈತ ಒಂಟಿ ಮನೆಗಳಲ್ಲಿ ಕಳವಿಗೆ ಸಂಚು ರೂಪಿಸುತ್ತಿದ್ದ. ಕಳವು ಮಾಡಿ ಬಂದ ಹಣದಿಂದ ಐಷಾರಾಮಿ ಜೀವನ ನಡೆಸುತ್ತಿದ್ದ. ಇದಕ್ಕಾಗಿ ಕದ್ದ ಹಣದಿಂದಲೇ ಒಂದು ಓಮ್ನಿ ಕಾರು, ಎರಡು ಬೈಕ್‌ಗಳನ್ನು ಖರೀದಿಸಿದ್ದ. ಇವುಗಳನ್ನೂ ಸಹ ವಶಕ್ಕೆ ಪಡೆಯಲಾಗಿದ್ದು, ಕಳವು ಮಾಡಿದ ಹಣದಿಂದಲೇ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ಖರೀದಿಸಿದ್ದ ಒಂದು ನಿವೇಶನದ ದಾಖಲೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಮಾಗಡಿ ಪಿಎಸ್‌ಐ ವೆಂಟಕೇಶ್, ಡಿವೈಎಸ್‌ಪಿ ಓಂ ಪ್ರಕಾಶ್ ಹಾಗೂ ಸಿಬ್ಬಂದಿ ಇದ್ದರು.