ಜಿಲ್ಲೆ

ವಿದ್ಯಾರ್ಥಿಗಳಿಂದ ಗೋಮಯ ಹಣತೆ

Dakshina Kannada

ಸಂದೀಪ್ ಸಾಲ್ಯಾನ್ ಬಂಟ್ವಾಳ

ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದೆ. ಕರೊನಾ ಮಹಾಮಾರಿಯ ನಡುವೆಯೂ ದೀಪಾವಳಿಗೆ ಸಿದ್ಧತೆಗಳು ನಡೆಯುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಕಲ್ಪನೆಗೆ ಪೂರಕವಾಗಿ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ದೀಪಾವಳಿಗೆ ಗೋಮಯ ಬಳಸಿ ಹಣತೆಗಳನ್ನು ಸಿದ್ಧಪಡಿಸುತ್ತಿದ್ದಾರೆ.

ವಿದ್ಯಾರ್ಥಿಗಳು ಸ್ವಾವಲಂಬಿಗಳಾಗುವ ಜತೆಗೆ ವಿದೇಶಿ ವಸ್ತುಗಳಿಂದ ದೂರವಿರಬೇಕು ಎನ್ನುವ ಚಿಂತನೆಯೊಂದಿಗೆ ಈ ಕಾರ್ಯವನ್ನು ಮಾಡುತ್ತಿದ್ದು, ವಿದ್ಯಾಸಂಸ್ಥೆಯ ವಸುಧಾರಾ ಗೋಶಾಲೆಯ ಗೋವುಗಳ ಸೆಗಣಿ ಹಾಗೂ ಗೋಮಯವನ್ನು ಬಳಸಿಕೊಂಡೇ ಈ ಹಣತೆಗಳನ್ನು ಸಿದ್ಧಗೊಳಿಸಲಾಗುತ್ತಿದೆ.

ವಿದ್ಯಾರ್ಥಿಗಳನ್ನೇ ತರಬೇತುಗೊಳಿಸಿ ಹಣತೆಗಳನ್ನು ಮಾಡಲಾಗಿದ್ದು, 10 ಸಾವಿರ ಹಣತೆಗಳನ್ನು ಸಿದ್ಧಗೊಳಿಸುವ ಗುರಿಯೊಂದಿಗೆ ಈಗಾಗಲೇ ಎರಡುವರೆ ಸಾವಿರಕ್ಕೂ ಅಧಿಕ ಹಣತೆಗಳು ರಚನೆಯಾಗಿವೆ. ಹಣತೆ ರಚನೆಗೆ ಬೇಕಾದಷ್ಟು ಸೆಗಣಿಯನ್ನು ಪಾಕ ಭರಿಸಿ, ಅಚ್ಚಿಯಲ್ಲಿ ಒತ್ತಿ ಬಳಿಕ ಬಿಸಿಲಿನಲ್ಲಿ ಇಡಲಾಗುತ್ತದೆ. ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಅವರು ಈ ಕಾರ್ಯದ ಸಂಚಾಲಕರಾಗಿದ್ದು, ಜತೆಗೆ ಸಂಸ್ಥೆಯ ಶಿಕ್ಷಕರು, ಸಿಬ್ಬಂದಿ ಸಾಥ್ ನೀಡುತ್ತಿದ್ದಾರೆ. ಪ್ರತಿ ದಿನ 50ರಷ್ಟು ವಿದ್ಯಾರ್ಥಿಗಳು, 10 ಮಂದಿ ಆಸಕ್ತ ಪಾಲಕರು, 8 ಮಂದಿ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗುತ್ತಿದ್ದು, ಇವರನ್ನು ಎರಡು ವಿಭಾಗ ಮಾಡಿ ಹಣತೆ ತಯಾರಿಯ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ.

ಇ ಮಾರಾಟ ವ್ಯವಸ್ಥೆ: ಹಣತೆಯ ತಯಾರಿಗೆ ವ್ಯಯಿಸಲಾದ ಖರ್ಚನ್ನು ಸರಿದೂರಿಸುವ ನಿಟ್ಟಿನಲ್ಲಿ ಒಂದು ಹಣತೆಗೆ 5 ರೂ.ಗಳಂತೆ ಮಾರಾಟಕ್ಕೂ ಯೋಜನೆ ಹಾಕಿಕೊಳ್ಳಲಾಗಿದ್ದು, ಅದಕ್ಕಾಗಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಮೂಲಕ ಇ-ಮಾರ್ಕೆಟಿಂಗ್ ಮೂಲಕ ಗೂಗಲ್‌ನಲ್ಲಿ ಮುಂಗಡ ಬುಕ್ಕಿಂಗ್ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿದೆ.

ಮಣ್ಣಿನ ಹಣತೆಯೂ ಸಿದ್ಧ: ವಿದ್ಯಾಸಂಸ್ಥೆಯ ಗೋಶಾಲೆಯ 45 ಗೋವುಗಳ ಸೆಗಣಿಯಿಂದ ಹಣತೆ ತಯಾರಿಸುವ ಜತೆಗೆ 500ರಷ್ಟು ಮಣ್ಣಿನ ಹಣತೆಯನ್ನೂ ತಯಾರಿಸಲಾಗಿದೆ. ಗೋಮಯ ಹಣತೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಉರಿಸಬೇಕಿದ್ದು, ಸುಮಾರು ಅರ್ಧ, ಮುಕ್ಕಾಲು ಗಂಟೆಗಳ ಕಾಲ ಉರಿಯಲಿದೆ. ಬಳಿಕ ಒಟ್ಟು ಹಣತೆಯೇ ಉರಿದರೂ ಯಾವುದೇ ತೊಂದರೆ ಇರುವುದಿಲ್ಲ.

ಪ್ರಧಾನಿಯವರ ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ವಿದ್ಯಾರ್ಥಿಗಳ ಮೂಲಕ ಗೋಮಯ ಹಣತೆಯ ತಯಾರು ಮಾಡಲಾಗುತ್ತಿದ್ದು, ದೇಶೀಯ ಹಸುವಿನ ಸೆಗಣಿಯನ್ನೇ ಬಳಸಿ ಹಣತೆ ತಯಾರಿಸಲಾಗುತ್ತಿದೆ. ಒಟ್ಟು 10 ಸಾವಿರ ಹಣತೆಗಳನ್ನು ತಯಾರಿಸುವ ಗುರಿ ಹೊಂದಲಾಗಿದೆ. -ಕೃಷ್ಣಪ್ರಸಾದ್ ಕಾಯರ್‌ಕಟ್ಟೆ ಪ್ರಾಂಶುಪಾಲರು, ಶ್ರೀರಾಮ ಪದವಿ ಕಾಲೇಜು, ಕಲ್ಲಡ್ಕ