ಮಂಗಳೂರು: ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಷಷ್ಠೃಬ್ಧ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಶ್ರೀಗಳ ಆಶಯದಂತೆ ರಾಮರಾಜ್ಯ ಪರಿಕಲ್ಪನೆಯಲ್ಲಿ ಎ.12ರಿಂದ 15ರ ತನಕ ನಾಡು-ನುಡಿ ಜಾಗೃತಿ ಸಮ್ಮೇಳನ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜುಪ್ರಾಸಾದದಲ್ಲಿ ಆಯೋಜಿಸಲಾಗಿದೆ.
ಶ್ರೀಗಳು ತನ್ನ ಷಷ್ಠೃಬ್ಧ ಸಮಾರಂಭವನ್ನು ಕೇವಲ ಮಠಕ್ಕೆ ಸೀಮಿತಗೊಳಿಸದೆ ಅದನ್ನು ರಾಮರಾಜ್ಯ ಪರಿಕಲ್ಪನೆಯಲ್ಲಿ ನಾಡು-ನುಡಿ ಜಾಗೃತಿ ಮೂಡಿಸುವಂತೆ ಆಶಯ ವ್ಯಕ್ತಪಡಿಸಿದ್ದು, ಈ ನೆಲೆಯಲ್ಲಿ ಕಲ್ಕೂರ ಪ್ರತಿಷ್ಠಾನವು ಕಾರ್ಯೋನ್ಮುಖವಾಗಿ ಒಟ್ಟು 60 ಕಾರ್ಯಕ್ರಮಗಳನ್ನು ಸರಣಿ ರೂಪದಲ್ಲಿ ಆಚರಿಸಲು ನಿರ್ಧರಿಸಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ್ ಕುಮಾರ್ ಕಲ್ಕೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರಾಭಿಮಾನ, ಮಾತೃ ಸಮಾಜ, ಮಾತೃಭಾಷಾ ಸಂರಕ್ಷಣೆ, ವ್ಯಸನಮುಕ್ತ ಸ್ವಸ್ಥ ಸಮಾಜ, ಸಂಸ್ಕಾರಯುಕ್ತ ಸಮಾಜದ ನಿರ್ಮಾಣದ ಹಂಬ, ಭೂ ದಾನ, ಗೋ ದಾನ, ವಸ್ತ್ರ ದಾನ, ವಿದ್ಯಾ ದಾನ, ಔಷಧ ದಾನ ಹೀಗೆ ಹಲವಾರು ಉಪಯುಕ್ತ ವಿಚಾರಗಳನ್ನು ಜನಮಾನಸದಲ್ಲಿ ಪಡಿಮೂಡಿಸುವ ಆಲೋಚನೆಯೊಂದಿಗೆ ಕಾರ್ಯಕ್ರಮಗಳನ್ನು ಆಯೋಜಿಸುವ ಪ್ರಯತ್ನವನ್ನು ಕಲ್ಕೂರ ಪ್ರತಿಷ್ಠಾನ ಮಾಡುತ್ತಿದೆ. ವಿಧ್ವಾಂಸರುಗಳಿಂದ ನಾಡು-ನುಡಿ ಜಾಗೃತಿ ಸಂದೇಶಗಳನ್ನು ನೀಡುವ ಮೂಲಕ ಜನಜಾಗೃತಿಯ ಆಶಯವನ್ನು ಹೊಂದಲಾಗಿದೆ ಎಂದು ಕಲ್ಕೂರ ಹೇಳಿದರು.
ಎ.13ರಂದು ಮಧ್ಯಾಹ್ನ 1.30ರಿಂದ ಸಮತಾ ಭಜನಾ ಬಳಗದಿಂದ ಭಜನೆ ಹಾಗೂ ಹಿರಿಯ ವಿಧ್ವಾಂಸ ಡಾ.ವರದರಾಜ ಚಂದ್ರಗಿರಿ ಅವರಿಂದ ನಾಡು-ನುಡಿ ಜಾಗೃತಿ ಸಂದೇಶ, ಸೀತಾರಾಮ ತೋಳ್ಪಡಿತ್ತಾಯ ಅವರ ಸಂಯೋಜನೆಯಲ್ಲಿ ಚೂಡಾಮಣಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಎ.14ರಂದು 1.30ರಿಂದ ಶ್ರೀದೇವಿ ಭಜನಾ ಬಳಗದಿಂದ ಭಜನೆ, 2 ಗಂಟೆಯಿಂದ ಪ್ರೊ.ಎಂ.ಬಿ.ಪುರಾಣಿಕ್ ಅವರಿಂದ ನಾಡು-ನುಡಿ ಜಾಗೃತಿ ಸಂದೇಶ ನೀಡುವರು. 3.30ರಿಂದ ಮಹಿಳಾ ಯಕ್ಷಗಾನ ತಾಳಮದ್ದಳೆ ಗುರುದಕ್ಷಿಣೆ ನಡೆಯಲಿದೆ. ಎ.15ರಂದು ಯುಗಾದಿ ಹಬ್ಬ ಆಚರಣೆ (ಬಿಸುಕಣಿ), ಪಂಚಾಂಗ ಶ್ರವಣ, 2.30ರಿಂದ 3.30 ಮಂಗಳಾದೇವಿ ಶಿವಳ್ಳಿ ಸ್ಪಂದನಾ ಬಳಗದಿಂದ ಭಜನೆ, ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಶ್ರೀ ಪಲಿಮಾರು ಮಠ (ಕಿರಿಯ ಪಟ್ಟ) ಶ್ರೀ ವಿದ್ಯಾರಾಜಶೇಖರ ಸ್ವಾಮೀಜಿ ಅವರು ಅನುಗ್ರಹ ಸಂದೇಶ ನೀಡುವರು. ಡಾ.ಎಂ.ಪ್ರಭಾಕರ ಜೋಶಿ ನಾಡು-ನುಡಿ ಸಂದೇಶ ನೀಡುವರು. ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸುವರು ಎಂದವರು ಹೇಳಿದರು.
ಪ್ರತಿಷ್ಠಾನದ ಪದಾಧಿಕಾರಿಗಳಾದ ಸುಧಾಕರ ರಾವ್ ಪೇಜಾವರ, ಜನಾರ್ದನ ಹಂದೆ, ಕದ್ರಿ ನವನೀತ ಶೆಟ್ಟಿ, ಶಿವಪ್ರಸಾದ್ ಸುದ್ದಿಗೋಷ್ಠಿಯಲ್ಲಿದ್ದರು.