ಹಟ್ಟಿಚಿನ್ನದಗಣಿ: ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸಮೀಪದ ಕಾಳೇಶ್ವರ ಕೆರೆಯಲ್ಲಿ ಸಂಪ್ ನಿರ್ಮಿಸಿ, ಪೈಪ್‌ಲೈನ್ ಮೂಲಕ ನೀರು ಪೂರೈಸುವ ಕಾಮಗಾರಿ ಯಶಸ್ವಿಯಾಗದೆ ನಿಷ್ಪ್ರಯೋಜಕವಾಗಿದೆ.
ಪಟ್ಟಣದಲ್ಲಿ ವ್ಯಾಪಕ ನೀರಿನ ತೊಂದರೆ ಇದ್ದುದರಿಂದ 10 ವರ್ಷದ ಹಿಂದೆ 6 ಕಿ.ಮೀ.ದೂರದ ಕಾಳೇಶ್ವರ ಕೆರೆಯಲ್ಲಿ ಸಂಪ್ ನಿರ್ಮಾಣ ಮಾಡಿ ಅಲ್ಲಿಂದ ಪೈಪ್‌ಲೈನ್ ಮೂಲಕ ನೀರು ಪೂರೈಸಲು ಜಿಲ್ಲಾಡಳಿತ 6 ಲಕ್ಷ ರೂ. ಹಾಗೂ ಹಟ್ಟಿಚಿನ್ನದಗಣಿ ಕಂಪನಿ ಒದಗಿಸಿದ 10 ಲಕ್ಷ ರೂ. ನೆರವಿನಲ್ಲಿ ಕಾಮಗಾರಿ ಕೈಗೆತ್ತಿಕೊಂಡು ನಿರ್ಮಾಣದ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿತ್ತು.
2011ರ ಮಾರ್ಚನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಯೋಜನೆಗೆ ಗ್ರಾಪಂನಿಂದಲೂ ಉದ್ಯೋಗ ಖಾತ್ರಿ ಕಾಮಗಾರಿಯಡಿ 10 ಲಕ್ಷ ರೂ. ವಿನಿಯೋಗಿಸಲಾಯಿತು. ತೆವಳುತ್ತಾ ಸಾಗಿದ ಕಾಮಗಾರಿ 2 ವರ್ಷದ ನಂತರ ಪೂರ್ಣಗೊಂಡಿತ್ತು. ನೀರು ಪೂರೈಕೆಗೆ ಚಾಲನೆ ನೀಡಲಾದರೂ ಪಟ್ಟಣದವರೆಗೆ ಸರಿಯಾಗಿ ನೀರು ಪೂರೈಕೆಯಾಗದೆ ಆರಂಭದಲ್ಲೇ ಯೋಜನೆ ವಿಫಲಗೊಂಡಿತ್ತು.
ಕಳಪೆ ಹಾಗೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದರಿಂದ ಅಂದುಕೊಂಡಂತೆ ನೀರು ಪೂರೈಕೆಯಾಗದೆ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿದೆ. ಕೇವಲ ಒಂದೆರಡು ವಾರ್ಡ್‌ಗಳಿಗೆ ಒಂದೆರಡು ಗಂಟೆ ನೀರು ಪೂರೈಕೆಯಾಗುತ್ತಿತ್ತು. ಉಳಿದ ವಾರ್ಡ್‌ಗಳಿಗೆ ಹನಿ ನೀರು ಸಹ ಬಾರದಂತಾಯಿತು.
ಕಾಮಗಾರಿ ವಿಫಲವಾದ ಬಗ್ಗೆ ಆರಂಭದಲ್ಲಿ ನಾನಾ ಸಂಘಟನೆಗಳು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದ್ದರೂ ಪ್ರಯೋಜನವಾಗಲಿಲ್ಲ. ಜಿಲ್ಲಾಡಳಿತ, ಹಟ್ಟಿಚಿನ್ನದಗಣಿ ಕಂಪನಿ ಸಹಾಯಧನದೊಂದಿಗೆ ಹಟ್ಟಿ ಪಟ್ಟಣದ ನೀರಿನ ಸಮಸ್ಯೆ ನಿವಾರಿಸಲು ಯೋಜನೆ ಒದಗಿಸಿಕೊಟ್ಟರೂ, ಸದುಪಯೋಗ ಪಡಿಸಿಕೊಳ್ಳುವಲ್ಲಿ ಸ್ಥಳೀಯ ಆಡಳಿತ ಸಫಲವಾಗಿಲ್ಲ.