ಜಿಲ್ಲೆ

ಕಾಲವೇ ಮೋಸಗಾರ ಬಿಡುಗಡೆ

Dharwada - Basavaraj Idli

ಹುಬ್ಬಳ್ಳಿ: ಪ್ರೀತಿ, ಪ್ರೇಮದ ಕಥಾ ಹಂದರ, ಅದರಲ್ಲಿ ಎದುರಾಗುವ ಮೋಸ ಇತ್ಯಾದಿಗಳನ್ನು ತೆರೆಯ ಮೇಲೆ ತೆಗೆದುಕೊಂಡು ಬಂದಿರುವ "ಕಾಲವೇ ಮೋಸಗಾರ' ಸಿನೆಮಾ ಜೂನ್ 20ರಂದು ರಾಜ್ಯಾದಂತ 50ಕ್ಕೂ ಹೆಚ್ಚು ಥೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಟ ಭರತ್ ಸಾಗರ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಚಿತ್ರದ ಪ್ರಚಾರ ಫಲಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಬೆಂಗಳೂರಿನ ಡಿಎಂಡಬ್ಲ್ಯೂ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಚಲನಚಿತ್ರವು ಸಂಪೂರ್ಣ ಹೊಸಬರ ಚಿತ್ರವಾಗಿದೆ. ಲವ್, ಟ್ರೆಂಡ್, ಕಾಲದ ಪ್ರೀತಿ, ಸ್ವಾರ್ಥ ಮುಂತಾದ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಲಾಗಿದೆ. ಯುವ ಸಮುದಾಯಕ್ಕೆ ಒಂದು ಉತ್ತಮ ಸಂದೇಶ ನೀಡುವ ಕಥೆ ಇದಾಗಿದೆ. ಐದು ಫೈಟ್, ಐದು ಹಾಡುಗಳಿರುವ ಚಿತ್ರವು ಕ್ಲಾಸ್, ಮಾಸ್, ಹಾಸ್ಯ ಎಲ್ಲವನ್ನೂ ಒಳಗೊಂಡಿದೆ. ಹಾಗಾಗಿ ಕುಟುಂಬ ಸಮೇತ ನೋಡಬಹುದಾಗಿದೆ ಎಂದರು.

ಕಮಲಿ ಧಾರವಾಹಿಯ ನಟಿ ಯಶಸ್ವಿನಿ ರವೀಂದ್ರ, ಕುರಿ ಪ್ರತಾಪ್, ವಿಜಯ ಚೆಂಡೂರ್ ಸೇರಿ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಥ್ರಿಲ್ಲರ್ ಮಂಜು ಸಾಹಸ, ಕೆ. ಲೋಕೇಶ ಸಂಗೀತ, ಕ್ರಾಂತಿಕುಮಾರ ಛಾಯಾಗ್ರಹಣ, ರಿತ್ವಿಕ್ ಸಂಕಲನ ಮಾಡಿದ್ದಾರೆ. ಸಂಜಯ್ ಪೌರಾಣಿಕ ನಿರ್ದೇಶನ ಮಾಡಿದ್ದಾರೆ ಎಂದರು.

ಚಿತ್ರದ ಹಾಡುಗಳು ಈಗಾಗಲೇ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ. ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಕನ್ನಡಿಗರು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಶಿವಾನಂದ ಮುತ್ತಣ್ಣವರ, ವಿಜಯಕುಮಾರ ಅಪ್ಪಾಜಿ, ಡೇವಿಡ್, ನಾಗರಾಜ್ ಇದ್ದರು.