ಸುಳ್ಯ: ವಿದ್ಯಾರ್ಥಿಗಳಲ್ಲಿ ಜೀವನ ಕೌಶಲ ಬೆಳೆಸುವ ಉದ್ದೇಶದಿಂದ ಸುಳ್ಯ ಸ.ಪ.ಪೂ.ಕಾ. 8, 9ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಕಲರವ ವಿಶೇಷ ಶಿಬಿರ ಸಮಾಪನಗೊಂಡಿತು.
15 ದಿನಗಳ ಈ ಶಿಬಿರದಲ್ಲಿ 90 ವಿದ್ಯಾರ್ಥಿಗಳು ವಿವಿಧ ಚಟುವಟಿಕೆ, ಕ್ಷೇತ್ರ ಭೇಟಿಗಳ ಮೂಲಕ ಜೀವನ ಅನುಭವ ಪಡೆದರು.
ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರಿಂದ ಸ್ಥಳೀಯ ಸರ್ಕಾರ, ಪುರುಷೋತ್ತಮ ಎಂ.ಎಸ್. ಅವರಿಂದ ಕರಕೌಶಲ, ಶಿಕ್ಷಕ ಇಬ್ರಾಹಿಂ ಗಾಂಧಿನಗರ ಅವರಿಂದ ಸರಳ ಪ್ರಯೋಗ, ನಾಗರಾಜ ಪೆರ್ಲಂಪಾಡಿ ಅವರಿಂದ ಹಾಡುಗಾರಿಕೆ, ಹೇಮಂತ್ ಉಡುಪಿ ಅವರಿಂದ ಜನಪದ ನೃತ್ಯ, ಕೃಷ್ಣಪ್ಪ ಬಂಬಿಲ ಅವರಿಂದ ರಂಗಭೂಮಿ, ವಾಸುದೇವ ರೈ ಅವರಿಂದ ಮುಖವರ್ಣಿಕೆ, ದುರ್ಗಾ ಕುಮಾರ್ ನಾಯರ್ ಕೆರೆ ಅವರಿಂದ ಪತ್ರಿಕೋದ್ಯಮ, ಅರವಿಂದ ಕುಡ್ಲ ಅವರಿಂದ ಪರಿಸರ ಮತ್ತು ಪಕ್ಷಿ ವೀಕ್ಷಣೆ, ಪಟ್ಟಾಭಿರಾಮ ಸುಳ್ಯ ಅವರಿಂದ ಮಿಮಿಕ್ರಿ, ಶ್ಯಾಡೋ ಪ್ಲೇ, ಚಂದ್ರಮತಿ ಮತ್ತು ಮಮತಾ ಅವರಿಂದ ಕಥೆ, ಕವನ ರಚನೆ. ಪೂರ್ಣಿಮಾ ಟಿ., ಲತಾ ವೆಂಕಟೇಶ ಪೈ ಅವರಿಂದ ಸ್ಕೌಟ್ ವಿಷಯಗಳ ಬಗ್ಗೆ ಮಾಹಿತಿ ಪಡೆದರು.
ಕ್ಷೇತ್ರ ಭೇಟಿಯಲ್ಲಿ ತಾಪಂ ಸುಳ್ಯ ಅರಂಬೂರು ಪ್ಲೈವುಡ್ ಕಾರ್ಖಾನೆ, ಅರಂಬೂರಿನ ಮರದ ಡಿಪೋ, ಸ್ನೇಹ ಶಾಲೆ ಸುಳ್ಯ ಗಾಂಧಿನಗರ ಕೆಪಿಎಸ್ ಶಾಲೆ ವಿಜ್ಞಾನ ಪ್ರಯೋಗಾಲಯ, ಕೆವಿಜಿ ಮೆಡಿಕಲ್ ಕಾಲೇಜು, ಕೆವಿಜಿ ಆಯುರ್ವೇದ ಕಾಲೇಜು, ಸುಳ್ಯ ಪತ್ರಿಕಾ ಭವನ, ಸುಳ್ಯ ಕನ್ನಡ ಭವನಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಜತೆ ಸಂವಾದ, ಪತ್ರಿಕಾ ಭವನದಲ್ಲಿ ಪತ್ರಕರ್ತರ ಜತೆ ನೇರ ಸಂವಾದ, ಸುಳ್ಯ ನ್ಯಾಯಾಲಯದ ಕಲಾಪಗಳ ನೇರ ವೀಕ್ಷಣೆ, ಬಂಟಮಲೆಗೆ ಅಧ್ಯಯನ ಪ್ರವಾಸ ಶಿಬಿರದ ವಿಶೇಷತೆಗಳಲ್ಲಿ ಕೆಲವು.
ಉಪಪ್ರಾಂಶಪಾಲ ಪ್ರಕಾಶ ಮೂಡಿತಾಯ ನಿರ್ದೇಶನದಲ್ಲಿ ನಡೆದ ಶಿಬಿರವನ್ನು ಶಿಕ್ಷಕರಾದ ಚಂದ್ರಾವತಿ, ಜಲಜಾಕ್ಷಿ ಸಂಘಟಿಸಿದರು. ಶಿಬಿರದ ಕೊನೆಯ ದಿನ ವಸ್ತುಪ್ರದರ್ಶನ, ವಿಜ್ಞಾನ ಪ್ರಯೋಗ, ವಿವಿಧ ಸಾಹಿತ್ಯ ರಚನೆ ಬಿಡುಗಡೆ, ರಂಗ ಚಟುವಟಿಕೆ, ಹಾಡು, ಅನುಭವ ಕಥನ ಕಾರ್ಯಕ್ರಮಗಳನ್ನು ಶಿಬಿರಾರ್ಥಿಗಳೇ ಸಂಘಟಿಸಿದ್ದು ವಿಶೇಷವಾಗಿತ್ತು.