ವಿಜಯವಾಣಿ ಸುದ್ದಿಜಾಲ ಉಡುಪಿ
ದೇವರಿಗೆ ಹರಕೆ ಹೇಳಿಕೊಳ್ಳುವ ಕಲೆ ಇದ್ದರೆ ಅದು ಯಕ್ಷಗಾನ ಮಾತ್ರ. ಸಂಗೀತ ಸೇರಿದಂತೆ ಯಾವ ಕಲೆಯಲ್ಲೂ ಈ ಪದ್ಧತಿ ಇಲ್ಲ. ಹೀಗಾಗಿ ಯಕ್ಷಗಾನ ಕಲೆಯಷ್ಟೇ ಅಲ್ಲ, ಅದು ದೇವರ ಪೂಜೆ. ಪುಣ್ಯಪ್ರದವಾದ ಶ್ರೇಷ್ಠ ಕಲೆ. ಉಡುಪಿ ಮಠದಲ್ಲಿ ಈ ಕಲೆ ಉದಯಿಸಿದ್ದು, ಕಲಾವಿದರು ಶತಮಾನಗಳಿಂದ ಬೆಳೆಸಿಕೊಂಡು ಬಂದಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಉಡುಪಿ ರಾಜಾಂಗಣದಲ್ಲಿ ಶ್ರೀಕೃಷ್ಣ ಮಠ, ಪರ್ಯಾಯ ಪುತ್ತಿಗೆ ಮಠ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದಲ್ಲಿ ಉಡುಪಿ ಯಕ್ಷಗಾನ ಕಲಾರಂಗ ಮೇ 31ರಂದು ಸಂಜೆ ಆಯೋಜಿಸಿದ್ದ ಯಕ್ಷಗಾನ ಕಲಾವಿದರ ಸಮಾವೇಶ ಮತ್ತು ಸಂಸ್ಥೆಯ ಸುವರ್ಣ ಸಡಗರ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಇದು ವ್ಯಾಯಾಮ ಕಲೆಯೂ ಆಗಿದೆ. ಯಕ್ಷ ಕಲಾವಿದರು 90 ವರ್ಷ ಮೇಲ್ಪಟ್ಟು ಅಥವಾ ಶತಾಯುಷಿ ಆಗಲು ಯಕ್ಷ ಕಲಾವಿದರಾಗಿರುವುದೇ ಕಾರಣ. ಟಿವಿ, ಮೊಬೈಲ್ ಬಂದ ಬಳಿಕವೂ ಆಕರ್ಷಣೆ, ಶ್ರೀಮಂತಿಕೆ ಉಳಿಸಿಕೊಂಡ ಕಲೆಯಿದು. ಅಂತಹ ಕಲೆಯ ಹೊಳಪನ್ನು ಯಕ್ಷಗಾನ ಕಲಾರಂಗ ಅನೇಕ ದಾನಿಗಳ ನೆರವಿನಿಂದ ಎಲ್ಲೆಡೆ ಪಸರಿಸುತ್ತಿದ್ದಾರೆ. ತಲೆತಲಾಂತರಕ್ಕೂ ಈ ಕಲೆ ಮುಂದುವರಿಯಲಿ ಎಂದು ಸುಗುಣೇಂದ್ರ ಶ್ರೀಪಾದರು ನುಡಿದರು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ, ಉಜ್ವಲ ಡೆವಲಪರ್ಸ್ನ ಮಾಲೀಕ ಪುರುಷೋತ್ತಮ ಶೆಟ್ಟಿ, ಕಾರ್ತಿಕ ಎಸ್ಟೇಟ್ನ ಮಾಲೀಕ ಹರಿಯಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರ್ವಹಿಸಿದರು.
ನಾಲ್ಕೈದು ದಶಕಗಳ ಕಾಲ ಯಕ್ಷಗಾನ ಕಲಾಸೇವೆ ಸಲ್ಲಿಸಿದ, 70 ವರ್ಷ ದಾಟಿದ 50 ಕಲಾವಿದರಿಗೆ ಲಕ ಹಾಗೂ ತಲಾ 50 ಸಾವಿರ ರೂ. ಮೊತ್ತದ ಗೌರವದೊಂದಿಗೆ ಯಕ್ಷಗಾನ ಕಲಾರಂಗ-ಸುವರ್ಣ ಪುರಸ್ಕಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಜತೆ ಕಾರ್ಯದರ್ಶಿಗಳಾದ ನಾರಾಯಣ ಎಂ. ಹೆಗಡೆ, ವಿದ್ಯಾಪ್ರಸಾದ ಇವರು ಪುರಸ್ಕಾರ ಸ್ವೀಕರಿಸಿದ ಕಲಾವಿದರ ಪರಿಚಯ ಮಾಡಿದರು. ಆರು ಜಿಲ್ಲೆಗಳ 40 ಮೇಳಗಳ 900ಕ್ಕೂ ಹೆಚ್ಚು ಕಲಾವಿದರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೃತಪಟ್ಟ ಕಲಾವಿದರ ಕುಟುಂಬಕ್ಕೆ ಸಾಂತ್ವನ ನಿಧಿಯನ್ನೂ ನೀಡಲಾಯಿತು. ರಾಜ್ಯದ ಆರು ಜಿಲ್ಲೆಗಳ 40 ಮೇಳಗಳ 900ಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು.
ಇಂದು ಪುರಸ್ಕಾರ ಸ್ವೀಕರಿಸಿದ ಈ ಕಲಾವಿದರು ಶ್ರೀಮಂತರಲ್ಲದೇ ಇರಬಹುದು. ಆದರೆ, ಜನರ ಬದುಕನ್ನು, ಯಕ್ಷಗಾನ ಕಲೆ, ಸಂಸತಿಯನ್ನು ಶ್ರೀಮಂತಗೊಳಿಸಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ, ಗೌರವಿಸಿರುವುದು ಕಲಾವಿದರ ಪಾಲಿನ ಹಬ್ಬವಾಗಿದೆ. ಇದು ಯಕ್ಷಗಾನದ ದೀಪಾವಳಿ ಹಬ್ಬವಾಗಿದೆ. | ಗುರ್ಮೆ ಸುರೇಶ ಶೆಟ್ಟಿ. ಕಾಪು ಶಾಸಕ ಕಲಾವಿದರ ನೋವು, ಸಮಸ್ಯೆಗಳಿಗೆ ಸ್ಪಂದಿಸಿ ಯಕ್ಷಗಾನದ ಸ್ವಾಭಿಮಾನ ಹೆಚ್ಚಿಸುವ ಕಾರ್ಯ ಯಕ್ಷಗಾನ ಕಲಾರಂಗದಿಂದ ಆಗಿದೆ. ಅದು ಉಡುಪಿ ಭಾಗದಿಂದ ಆಗುತ್ತಿರುವುದು ಕ್ಷೇತ್ರದ ಶಾಸಕನಾಗಿ ನನಗೆ ಹೆಮ್ಮೆ ಅಗುತ್ತಿದೆ. ಸರ್ಕಾರ ಮಾಡಬೇಕಿದ್ದ ಕೆಲಸವನ್ನು ಯಕ್ಷಗಾನ ಕಲಾರಂಗ ಮಾಡುತ್ತಿದೆ. | ಯಶ್ಪಾಲ್ ಸುವರ್ಣ. ಉಡುಪಿ ಶಾಸಕ