ಜಿಲ್ಲೆ

ಕಾಳಜಿ ರಿಲೀಫ್ ಫಂಡ್ ಹಸ್ತಾಂತರ ಕಾರ್ಯಕ್ರಮ

ಬೆಳ್ತಂಗಡಿ: ರಾಜಕೀಯ ಎಂಬುದು ನೊಂದ ಕುಟುಂಬಗಳ ನೆರವಿಗೆ ಇರುವಂಥದ್ದು. ಅತಿವೃಷ್ಟಿಯಿಂದ ನೊಂದ ಕುಟುಂಬಗಳಿಗೆ ದಾನಿಗಳ ನೆರವಿನೊಂದಿಗೆ 2.74 ಕೋಟಿ ರೂ. ವಿತರಿಸುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಸಾಧನೆ ರಾಜ್ಯದ ಎಲ್ಲ ಶಾಸಕರಿಗೆ ಮಾದರಿ ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

ಬೆಳ್ತಂಗಡಿ ಶ್ರೀ ಮಂಜುನಾಥೇಶ್ವರ ಕಲಾಭವನದಲ್ಲಿ ತಾಲೂಕಿನಲ್ಲಿ 2019ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಯಿಂದ ಹಾನಿಗೀಡಾದ 299 ಕುಟುಂಬಗಳಿಗೆ ಕಾಳಜಿ ರಿಲೀಫ್ ಫಂಡ್‌ನ ಪರಿಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಹಾಮಳೆಯ ಬೆನ್ನಲ್ಲೆ ಕೋವಿಡ್ 19 ಸಂಕಷ್ಟವನ್ನು ತಂದೊಡ್ಡಿದೆ. ಇದನ್ನು ದಿಟ್ಟವಾಗಿ ಎದುರಿಸಿ ಗ್ರಾಮೀಣ ಪ್ರದೇಶದಲ್ಲೇ ಇಷ್ಟೊಂದು ದೊಡ್ಡ ಕಾರ್ಯ ಮಾಡಿರುವುದು ಶ್ರೇಷ್ಠ ಸಾಧನೆ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿ, ತಾಲೂಕಿನಲ್ಲಿ ನೆರೆ ಬಂದುದು ಮರೆಯಲಾಗದ ಘಟನೆ. ಆದರೆ ಮನೆ, ಕೃಷಿ ಹಾನಿಯಾಗಿದೆ ಹೊರತು ದೇವರ ಅನುಗ್ರಹದಿಂದ ಜೀವ ಹಾನಿಯಾಗಿಲ್ಲ. ಪ್ರಪ್ರಥಮವಾಗಿ ಆಯ್ಕೆಯಾದ ಯುವ ಶಾಸಕ ಹರೀಶ್ ಪೂಂಜ ನೆರೆ ಸಂದರ್ಭದಲ್ಲಿ ಪಟ್ಟಂತಹ ಶ್ರಮ, ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಜನರೊಂದಿಗೆ ಬೆರೆತ ಕ್ಷಣ ಶ್ಲಾಘನೀಯ ಎಂದರು.

ಶಾಸಕ ಹರೀಶ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಜನರಿಂದ ಆಯ್ಕೆಯಾದ ನಾನು ಜನರ ಸೇವೆ ಮಾಡಬೇಕು ಎಂಬುದೇ ನನ್ನ ಆಸೆ. ಅಶಕ್ತ ಕುಟುಂಬಗಳಿಗೆ ಏನಾದರೂ ನೆರವು ನೀಡಬೇಕು ಎಂದು ಚಿಂತಿಸಿದಾಗ ಪ್ರಥಮವಾಗಿ ಉದ್ಯಮಿ ಶಶಿಧರ ಶೆಟ್ಟಿಯವರು 10 ಲಕ್ಷ ರೂ. ದೇಣಿಗೆ ನೀಡಿ ನೆರೆ ಸಂತ್ರಸ್ತರಿಗೆ ವಿತರಿಸಲು ಸೂಚಿಸಿದ್ದರು. ಸಮಾನ ಮನಸ್ಕರನ್ನು ಒಗ್ಗೂಡಿಸಿ ಅಭಿಪ್ರಾಯ ಸಂಗ್ರಹಿಸಿದಾಗ ಕಾಳಜಿ ರಿಲೀಫ್ ಫಂಡ್ ಪ್ರಾರಂಭಿಸುವ ಕಲ್ಪನೆ ಬಂದಿದೆ. ಬಳಿಕ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 50 ಲಕ್ಷ ರೂ. ಡಾ.ಮೋಹನ್ ಆಳ್ವಾರವರು 25 ಲಕ್ಷ ರೂ., ಬೆಂಗಳೂರಿನ ಉದ್ಯಮಿ 25 ಲಕ್ಷ ರೂ., ಹಾಗೂ ಅನೇಕ ದಾನಿಗಳು ನೆರವನ್ನು ನೀಡುವ ಮೂಲಕ ಶಕ್ತಿ ತುಂಬಿದ್ದಾರೆ. ಇದರ ವ್ಯವಹಾರವನ್ನು ಕಾರ್ಯದರ್ಶಿಗಳಾದ ಧನಂಜಯ ರಾವ್ ಮತ್ತು ಕೋಶಾಧಿಕಾರಿ ನಂದಕುಮಾರ್ ನೋಡಿಕೊಳ್ಳುತ್ತಿದ್ದು ನಾನು ಯಾವುದೇ ಚೆಕ್‌ಗೆ ಸಹಿ ಹಾಕುವವನಲ್ಲ. ಈ ಫಂಡ್‌ನಿಂದ ಹಣ ಮಾಡಿದ್ದೇನೆ ಎಂದು ಆರೋಪ ಮಾಡುವವರಿಗೆ ಶ್ರೀ ಮಾರಿಗುಡಿ ಅಮ್ಮನವರ ಸಮ್ಮುಖದಲ್ಲಿ ಪ್ರಮಾಣ ಮಾಡಿ ಹೇಳುತ್ತಿದ್ದು, ಯಾವುದೇ ರೀತಿಯ ಹಣ ಮಾಡುವ ಉದ್ದೇಶವಿಲ್ಲ ಜನರ ಸೇವೆಯೊಂದೇ ನನ್ನ ಗುರಿ ಎಂದರು.

ಧ.ಗ್ರಾ.ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್.ಮಂಜುನಾಥ್, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಕಾಳಜಿ ರಿಲೀಫ್ ಫಂಡ್‌ನ ಸದಸ್ಯರಾದ ಡಾ.ಗೋಪಾಲಕೃಷ್ಣ, ಮೋಹನ್ ಲಕ್ಷ್ಮೀ ಗ್ರೂಪ್ ಉಜಿರೆ, ರಾಜೇಶ್ ಪೈ ಸಂಧ್ಯಾ ಟ್ರೇಡರ್ಸ್‌ ಉಜಿರೆ, ಲ್ಯಾನ್ಸಿ ಪಿಂಟೋ, ಡಾ.ಎಂ.ಎಂ.ದಯಾಕರ್, ಪ್ರವೀಣ್, ಜಗದೀಶ್, ಅಬೂಬಕ್ಕರ್, ಗಣೇಶ್, ನಾರಾಯಣ್ ಸುವರ್ಣ, ಜಯಕರ್ ಶೆಟ್ಟಿ, ಕೋಶಾಧಿಕಾರಿ ನಂದಕುಮಾರ್ ಉಪಸ್ಥಿತರಿದ್ದರು. ಕಾಳಜಿ ರಿಲೀಫ್ ಫಂಡ್‌ನ ಪ್ರಧಾನ ಕಾರ್ಯದರ್ಶಿ ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು. ಧ.ಗ್ರಾ ಯೋಜನೆಯ ಯೋಜನಾಧಿಕಾರಿ ಜಯಕರ್ ಶೆಟ್ಟಿ ವಂದಿಸಿದರು.

ನನ್ನ ಅಭಿವೃದ್ಧಿ ಕಾರ್ಯವನ್ನು ಸಹಿಸದೆ ನಾನು ಜಾಗ ಖರೀದಿಸಿದ್ದೇನೆ. ಆಸ್ಪತ್ರೆ ಕಟ್ಟುತ್ತಿದ್ದೇನೆ ಎಂದು ಹಿರಿಯ ರಾಜಕಾರಣಿಯೊಬ್ಬರು ಆರೋಪಿಸುತ್ತಿದ್ದಾರೆ. ಇಂತಹ ಮಾತು ಅವರಿಗೆ ಶೋಭೆಯಲ್ಲ. ನನಗೆ ನನ್ನ ತಂದೆ ತಾಯಿ ಮಾಡಿದ ಆಸ್ತಿ ಇದೆ. ಇಂತಹ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಗೂ ಸಿದ್ಧನಿದ್ದೇನೆ. ನನ್ನ ಉಸಿರಿರುವ ತನಕ ತಾಲೂಕಿನ ಅಭಿವೃದ್ಧಿ, ಜನರ ಸೇವೆಯೇ ನನ್ನ ಗುರಿ. ಟೀಕೆಗಳಿಗೆ ಅಭಿವೃದ್ಧಿಯೇ ನನ್ನ ಉತ್ತರ.

-ಹರೀಶ್ ಪೂಂಜ, ಬೆಳ್ತಂಗಡಿ ಶಾಸಕ

ಜನರ ಸಂಕಷ್ಟಗಳಿಗೆ ಸ್ಪಂದಿಸಿದಾಗ, ಅವರೊಂದಿಗೆ ಕೈಜೋಡಿಸಿ ಶಕ್ತಿ ತುಂಬಬೇಕು. ಅವರನ್ನು ಟೀಕಿಸಿ ಚಾರಿತ್ರ್ಯ ಹರಣ ಮಾಡಿ ಶ್ರಮವನ್ನು ಕುಂದಿಸಿದರೆ ದೇವರು ಅನುಗ್ರಹಿಸುವುದಿಲ್ಲ. ಇನ್ನೊಬ್ಬರ ಕಷ್ಟ ನೋಡಿ ಅನುಕಂಪ ಬರುವವನೇ ನಿಜವಾದ ಮನುಷ್ಯ.

-ಪ್ರತಾಪ್‌ಸಿಂಹ ನಾಯಕ್, ವಿಧಾನಪರಿಷತ್ ಸದಸ್ಯ