ಜಿಲ್ಲೆ

ಬರ ಘೋಷಣೆಗೆ ಆಗ್ರಹಿಸಿ ಕಲಘಟಗಿ ಬಂದ್ ೯ರಂದು

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕಲಘಟಗಿ, ಅಳ್ನಾವರ, ಅಣ್ಣಿಗೇರಿ ಹಾಗೂ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಆಗ್ರಹಿಸಿ ಅಕ್ಟೋಬರ್ 9ರಂದು ಕಲಟಗಿ ಬಂದ್ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಅಧ್ಯಕ್ಷ ರವಿರಾಜ ಕಂಬಳಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಲಘಟಗಿ ಪಟ್ಟಣ ಮತ್ತು ರಾಜ್ಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲಾಗುವುದು. ಈ ನಾಲ್ಕು ತಾಲೂಕುಗಳ ಅಕ್ಕಪಕ್ಕದಲ್ಲಿ ಬರಗಾಲ ಘೋಷಣೆ ಮಾಡಿರುವ ಸರ್ಕಾರ ಕಲಘಟಗಿ ಮತ್ತು ಉಳಿದ ತಾಲೂಕುಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ತಾಲೂಕಿನಲ್ಲಿ ನಿರೀಕ್ಷಿತ ಮಳೆಯಾಗದೇ ಬೆಳೆ ಸಂರ್ಪೂಣ ಕೈಕೊಟ್ಟಿವೆ. ಹಸಿರು ಬರ ಇದೆ. ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಬರ ಘೋಷಿಸಲು ಹಲವು ಬಾರಿ ಮನವಿ ಮಾಡಿದ್ದರೂ ಸರ್ಕಾರ ಕಿವಿಗೊಟ್ಟಿಲ್ಲ. ಹಾಗಾಗಿ ಪ್ರತಿಭಟನೆ ಮಾಡಲಾಗುವುದು ಎಂದರು.

ರೈತರ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕ್ ಸಾಲ ಮನ್ನಾ ಮಾಡಬೇಕು. ಅಳ್ನಾವರ ತಾಲೂಕಿನ ಹಳ್ಳಿಗಳಿಗೆ ಏತ ನೀರಾವರಿ ಯೋಜನೆ ಜಾರಿ ಮಾಡಬೇಕು, ವಿಮಾ ಪರಿಹಾರ ಒದಗಿಸಬೇಕು. ಕಿಸಾನ್ ಸಮ್ಮಾನ ಯೋಜನೆಯ 4 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಬೇಕು ಎಂದೂ ಆಗ್ರಹಿಸಿದರು.

ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ ಹೋಳಿ, ಶಂಕ್ರಣ್ಣ ತಿಪ್ಪಣ್ಣವರ, ಪತ್ರೆವ್ವ ನವಲಗುಂದ ಗೋಷ್ಠಿಯಲ್ಲಿದ್ದರು.