ಕಲಘಟಗಿ: ಪ್ರತಿ ವರ್ಷ ಅಕ್ಟೋಬರ್ ಹೊಸ್ತಿಲಲ್ಲಿ ಧಾನ್ಯಗಳಿಂದ ತುಂಬಿ ತುಳುಕುತ್ತಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಈ ವರ್ಷದ ಬರಗಾಲದ ಹೊಡೆತಕ್ಕೆ ಧಾನ್ಯಗಳು ಹಾಗೂ ರೈತರಿಲ್ಲದೆ ಬಿಕೋ ಎನ್ನುತ್ತಿದೆ.
ಅಕ್ಟೋಬರ್ ಸಮೀಪಿಸುತ್ತಿದ್ದಂತೆ ಪಟ್ಟಣದ ಎಪಿಎಂಸಿಯಲ್ಲಿ ಧಾನ್ಯಗಳ ರಾಶಿ, ಏಜೆಂಟರುಗಳ ಹಾವಳಿ, ರೈತರ ಮಾತುಕತೆ, ವಾಹನಗಳ ದಟ್ಟಣೆ ಹಾಗೂ ಧಾನ್ಯ ತುಂಬಿದ ಚೀಲಗಳ ರಾಶಿಗಳಿಂದ ಕಂಗೊಳಿಸುತ್ತಿತ್ತು. ಆದರೆ, ಈ ವರ್ಷ ವ್ಯಾಪಾರಸ್ಥರು ಬಾಗಿಲು ಮುಚ್ಚಿದ್ದಾರೆ.
ಕಲಘಟಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 50ಕ್ಕೂ ಅಧಿಕ ಅಕ್ಕಡಿ ಕಾಳು ವ್ಯಾಪಾರಸ್ಥರು ದಿನಂಪ್ರತಿ ಸಾವಿರಾರು ಟನ್ಗಳಷ್ಟು ಧಾನ್ಯಗಳನ್ನು ಶಿಗ್ಗಾಂವಿ, ಧಾರವಾಡ, ಬೆಳಗಾವಿ ಸೇರಿ ವಿವಿಧ ಜಿಲ್ಲೆಯ ಕಾರ್ಖಾನೆಗಳಿಗೆ ರವಾನಿಸುತ್ತಿದ್ದರು. ಹಗಲಿರುಳೆನ್ನದೆ ಎಪಿಎಂಸಿಗೆ ಸುತ್ತಮುತ್ತಲಿನ ಗ್ರಾಮಗಳ ರೈತರು ಧಾನ್ಯಗಳನ್ನು ತುಂಬಿದ ಗೂಡ್ಸ್ ವಾಹನಗಳನ್ನು ತಂದು ಎಪಿಎಂಸಿ ಮುಂದೆ ಸಾಲುಗಟ್ಟಿ ನಿಲ್ಲಿಸುತ್ತಿದ್ದರು. ಆದರೆ, ಬರಗಾಲದಿಂದಾಗಿ ಈ ವರ್ಷ ಇಲ್ಲಿಯತನಕ ಕೇವಲ 50 ಚೀಲ ಕಾಳು ತುಂಬಿಸಲು ಆಗಿಲ್ಲ ಎಂದು ವ್ಯಾಪಾರಸ್ಥರು ಬೇಸರ ವ್ಯಕ್ತಪಡಿಸುತ್ತಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ 34,618 ಹೆಕ್ಟೇರ್ ಬಿತ್ತನೆ ಗುರಿ ಪೈಕಿ 34,364 ಹೆಕ್ಟೇರ್ನಲ್ಲಿ ಬಿತ್ತನೆ ಮಾಡಲಾಗಿತ್ತು. ಮೆಕ್ಕೆಜೋಳ 16,091 ಹೆಕ್ಟೇರ್, ಸೋಯಾಬೀನ್ 8,862 ಹೆಕ್ಟೇರ್, ಭತ್ತ 2,858 ಹೆಕ್ಟೇರ್, ಕಬ್ಬು 6,494 ಹೆಕ್ಟೇರ್, ಹತ್ತಿ 16 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಜೂನ್ ಮೊದಲನೇ ವಾರದಲ್ಲಿ ಶೇ. 75 ಬಿತ್ತನೆ ಮಾಡಲಾಗಿತ್ತು. ಆದರೆ, ಜೂನ್ನಲ್ಲಿ ಮಳೆ ಬಾರದೆ ಭೂಮಿಗೆ ಬಿದ್ದ ಕಾಳು ಮೊಳಕೆಯೊಡೆಯದೆ ಹಾಳಾಗಿ ಹೋಗಿದ್ದವು. ನಂತರ ಜುಲೈ ಮೊದಲನೇ ವಾರದಲ್ಲಿ ಮೊಳಕೆಯೊಡೆಯದ ಹೊಲಗಳನ್ನು ರೋಟೋವೇಟರ್ ಹೊಡೆದು ರೈತರು ಮತ್ತೊಮ್ಮೆ ಬಿತ್ತನೆಗೆ ಮುಂದಾಗಿದ್ದರು. ಆದರೆ, ಜುಲೈ ಮೊದಲನೇ ವಾರದಿಂದ ಹಿಡಿದ ಪುನರ್ವಸು ಮಳೆಗೆ ಬೀಜಗಳೆಲ್ಲವೂ ಸಂಪೂರ್ಣವಾಗಿ ಕೊಳೆತು ಸಮರ್ಪಕ ಬೆಳೆ ಬಾರದಂತಾಯಿತು.
ಕಳೆದ ಸಾಲಿನಲ್ಲಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಅಂದಾಜು 11 ಸಾವಿರ ಟನ್ ಮೆಕ್ಕೆಜೋಳ, 6ರಿಂದ 8 ಸಾವಿರ ಟನ್ ಸೋಯಾಬೀನ್, 3ರಿಂದ 4 ಸಾವಿರ ಟನ್ ಭತ್ತವನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಈ ವರ್ಷ ಸಮರ್ಪಕ ಬೆಳೆ ಇಲ್ಲದೆ ಇರುವುದರಿಂದ 100ರಿಂದ 150 ಟನ್ಗಳಷ್ಟು ಮಾತ್ರ ಎಪಿಎಂಸಿಗೆ ಮೆಕ್ಕೆಜೋಳ ಬಂದಿದೆ.
ಪ್ರತಿ ವರ್ಷ ಗಣೇಶ ಚತುರ್ಥಿ, ವಿಜಯದಶಮಿ ಹಬ್ಬ ಬಂದರೆ ಸಾಕು ರೈತರು ಹಬ್ಬಕ್ಕೆ ಹಣ ಬೇಕು ಎಂದು ಅವಸರವಾಗಿ ಹೊಲಗಳಲ್ಲಿ ಬೆಳೆದ ಬೆಳೆ ಕಟಾವು ಮಾಡಿ ಮಾರಾಟಕ್ಕೆ ಬಂದು ಕಾದು ಕುಳಿತುಕೊಳ್ಳುತ್ತಿದ್ದರು. ಆದರೆ, ಈ ವರ್ಷ ಬರಗಾಲ ಬಿದ್ದಿದ್ದರಿಂದ ಮಾರುಕಟ್ಟೆಯಲ್ಲಿ ಧಾನ್ಯಗಳ ದರ್ಶನವೇ ಅಪರೂಪವಾಗಿದೆ. | ಸಿದ್ದಯ್ಯ ಹಿರೇಮಠ, ಕಾಳು ವ್ಯಾಪಾರಸ್ಥ ಮುಂಗಾರು ಹಂಗಾಮಿನಲ್ಲಿ ಸಮಯಕ್ಕೆ ಸರಿಯಾಗಿ ಮಳೆಯಾಗದೇ ಇರುವುದರಿಂದ ಗೋವಿನಜೋಳ ಸಂಪೂರ್ಣವಾಗಿ ಕಳೆಗುಂದಿದೆ. 40ರಿಂದ 50 ಕ್ವಿಂಟಾಲ್ ಜೋಳ ಬೆಳೆಯುತ್ತಿದ್ದ, ಹೊಲಗಳಲ್ಲಿ 10 ಕ್ವಿಂಟಾಲ್ ಬೆಳೆಯೂ ಇಲ್ಲದಂತಾಗಿದೆ. ಇದರಿಂದ ಹೊಲಕ್ಕೆ ಖರ್ಚು ಮಾಡಿದ ಹಣವೆಲ್ಲ ಸಾಲವಾಗಿ ಜೀವನಕ್ಕೆ ಬರೆ ಎಳೆದಂತಾಗಿದೆ. | ವೀರಯ್ಯ ಚಿಕ್ಕಮಠ, ಹುಲಿಕಟ್ಟಿ ಗ್ರಾಮದ ರೈತ