ಕಲಾದಗಿ: ಕೇಂದ್ರ ಸರ್ಕಾರದ ದೂರದರ್ಶನದ ಕೇಂದ್ರದ ನೌಕರಿ ಎಂದು ಹೇಳಿ ಖೊಟ್ಟಿ ಆದೇಶ ಪತ್ರವನ್ನು ಪೋಸ್ಟ್‌ನಲ್ಲಿ ಕಳುಹಿಸಿ ಗ್ರಾಮದ ಯುವಕನೊಬ್ಬನಿಂದ ಸಾವಿರಾರು ರೂ.ಪಡೆಯುವ ಪ್ರಯತ್ನದ ವಂಚನೆ ಪ್ರಕರಣ ನಡೆದಿದ್ದು, ಯುವಕ ಜಾಣತನದಿಂದ ಈ ಮೋಸದ ಬಲೆಯಿಂದ ತಪ್ಪಿಸಿಕೊಂಡಿದ್ದಾನೆ. ವಂಚಕರು ಹೇಗೆಲ್ಲ ಮುಗ್ಧ ಜನರನ್ನು ವಂಚಿಸುತ್ತಾರೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಏನಿದು ಪ್ರಕರಣ
ಗ್ರಾಮದ ಸಾಯಿರಾಮ ಎಂಬ ಯುವಕನಿಗೆ ನಾಲ್ಕು ದಿನಗಳ ಹಿಂದೆ ರಿಜಿಸ್ಟರ್ ಪೋಸ್ಟ್‌ನಲ್ಲಿ ‘ದೂರ ಸಂಚಾರ ಏವಮ್ ಪ್ರಸಾರ ಭಾರತಿ ವಿಭಾಗ’ ತಲೆಬರಹವಿರುವ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಲಾಂಛನವಿರುವ ನೌಕರಿಯ ಆದೇಶದ ಪತ್ರ ಬಂದಿದೆ.
ಎರಡು ವರ್ಷಗಳ ಹಿಂದೆ ಬೆಂಗಳೂರು ದೂರದರ್ಶನ ಕೇಂದ್ರಕ್ಕೆ ನೌಕರಿಯೊಂದಕ್ಕೆ ಅರ್ಜಿ ಹಾಕಿದ್ದ ಈ ಯುವಕ, ಅದೇ ನೌಕರಿಯ ಆದೇಶವಿರಬೇಕೆಂದು ಖುಷಿಪಟ್ಟಿದ್ದಾನೆ. ಅದೇ ಖುಷಿಯಲ್ಲಿ ಅದರ ಆರಂಭದಲ್ಲಿರುವ ಕಾಂಟ್ಯಾಕ್ಟ್ ಎಂದಿದ್ದ 093194 56257 ಸಂಖ್ಯೆಯನ್ನು ಸಂಪರ್ಕಿಸಿದ್ದಾನೆ. ಆ ಕಡೆಯಿಂದ ಬೆಂಗಳೂರಿನಿಂದ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡ ವ್ಯಕ್ತಿ ಕೂಡಲೇ 23,500 ರೂ. ನಾನು ಹೇಳುವ ಬ್ಯಾಂಕ್ ಖಾತೆಗೆ ತುಂಬಬೇಕು. ಆ ಮೇಲೆ ನೀವು ಕೆಲಸಕ್ಕೆ ಹಾಜರಾಗಬಹುದು ಎಂದಿದ್ದಾನೆ. ನಾವು ಅಲ್ಲಿಯೇ ಬಂದು ಭೇಟಿಯಾಗಿ ಹಣ ಕೊಡುತ್ತೇವೆ ಎಂದು ಈತ ಹೇಳಿದರೂ ಆತ ಅದಕ್ಕೆ ಒಪ್ಪಿಕೊಂಡಿಲ್ಲ. ಇದರಿಂದ ಸಂಶಯಗೊಂಡು ಅನೇಕ ಪ್ರಶ್ನೆಗಳನ್ನು ಕೇಳುತ್ತಿದ್ದಂತೆ ಆತ ತನ್ನ ಫೋನ್ ಸ್ಥಗಿತಗೊಳಿಸಿದ್ದಾನೆ.
ತಮ್ಮ ಸಂಬಂಧಿಕರೊಬ್ಬರ ಮೂಲಕ ದೂರದರ್ಶನ ಕೇಂದ್ರದಲ್ಲಿರುವವರನ್ನು ಸಂಪರ್ಕಿಸಿದ ಯುವಕನಿಗೆ ಇದು ವಂಚನೆಯ ಜಾಲ ಎಂಬುದು ಖಾತರಿಯಾಗಿ ಮೋಸದಿಂದ ಪಾರಾಗಿದ್ದಾನೆ.
ದೂರದ ರಾಜ್ಯದಿಂದ ಪತ್ರ
ನೌಕರಿಯ ಖೊಟ್ಟಿ ಆದೇಶ ಪತ್ರ ಹರಿಯಾಣ ಜಿಲ್ಲೆಯ ರಿದಾಬಾದ್‌ನ ಅಂಚೆ ಕಚೇರಿಯೊಂದರಿಂದ ರಿಜಿಸ್ಟರ್ ಪೋಸ್ಟ್ ಮೂಲಕ ರವಾನೆಯಾಗಿದ್ದು, ವಂಚಕ ಅಲ್ಲಿಯವನೆಂಬುದು ವೇದ್ಯವಾಗುತ್ತದೆ. ದೂರದಲ್ಲಿ ಎಲ್ಲೋ ಕುಳಿತು ವಂಚಿಸುತ್ತಿರುವ ಇಂತಹ ಮೋಸದ ಜಾಲದ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕಾಗಿದೆ.