ಕಲಬುರಗಿ: ದೇಶದಲ್ಲಿ 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಆಡಳಿತದ ಗದ್ದುಗೆ ಏರಲು ಅರಾಜಕತೆ ಸೃಷ್ಟಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು, ದೇಶದ ಜನರು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ಸಿಂಗ್ ಕಿಡಿಕಾರಿದರು.
ನಗರದಲ್ಲಿ ಭಾರತೀಯ ಜನತಾ ಪಕ್ಷದಿಂದ ಬುಧವಾರ ಏರ್ಪಡಿಸಿದ್ದ ಅರಾಜಕತೆ ಅಳಿಸಿ ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಬೃಹತ್ ಪಾದಯಾತ್ರೆಯ ನೇತೃತ್ವ ವಹಿಸಿ ಮಾತನಾಡಿ, ಕಾಂಗ್ರೆಸ್ ಚುನಾವಣೆ ಆಯೋಗ, ನ್ಯಾಯಾಲಯ ಸೇರಿ ಎಲ್ಲ ಸಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಸೃಷ್ಟಿಸುತ್ತಿದೆ. ಬೀದಿಯಲ್ಲಿ ದಂಗೆ ಎಬ್ಬಿಸಿದರೆ ಆಡಳಿತ ಬದಲಾಗಲ್ಲ. ಜನರ ಮನ ಗೆಲ್ಲಬೇಕು ಎಂದರು.
ಬೃಹತ್ ಪಾದಯಾತ್ರೆ: ಅರಾಜಕತೆ ಅಳಿಸಿ, ಪ್ರಜಾಪ್ರಭುತ್ವ ಉಳಿಸಿ ಅಭಿಯಾನದ ಭಾಗವಾಗಿ ನಗರದ ಸೂಪರ್ಮಾರ್ಕೆಟ್ನಿಂದ ಅನ್ನಪೂರ್ಣ ವೃತ್ತದವರೆಗೆ ಸಹಸ್ರಾರು ಬಿಜೆಪಿ ಕಾರ್ಯಕರ್ತರ ಮಧ್ಯೆ ಬೃಹತ್ ಪಾದಯಾತ್ರೆ ನಡೆಯಿತು. ಮೋದಿ ಕಹೀ ನಹೀ ಜಾಯೇಗಾ ಘೋಷಣೆ, ಹಾಡುಗಳೊಂದಿಗೆ ಜೈಕಾರದ ಜತೆ ಪಾದಯಾತ್ರೆ ನಡೆಸಲಾಯಿತು.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪಿ.ರಾಜೀವ್, ಅರುಣ ಶಹಾಪುರ್, ರಾಜುಗೌಡ ನಾಯಕ, ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಚಂದು ಪಾಟೀಲ್, ಅಶೋಕ ಬಗಲಿ, ಉಮೇಶ ಜಾಧವ್, ಶಶೀಲ ನಮೋಶಿ, ರಾಜಕುಮಾರ ಪಾಟೀಲ್ ತೆಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ ಇತರರಿದ್ದರು.
ವಿದೇಶಿಗರ ಜತೆ ಕೂಡಿ ಕಾಂಗ್ರೆಸ್ನಿಂದ ದೇಶಕ್ಕೆ ಅಪಮಾನ: ಕಾಂಗ್ರೆಸ್ಸಿಗರು ಇಟಲಿಯಿಂದ ನಾಯಕನನ್ನು ಕರೆಸಿ, ಹೈದರಾಬಾದ್ನಲ್ಲಿ ಕಾರ್ಯಕ್ರಮ ಏರ್ಪಡಿಸಿ ಆತನಿಂದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೀಳು ಮಾತನಾಡಿಸಿದ್ದಾರೆ. ಕಾಂಗ್ರೆಸ್ಸಿಗರು ಚಪ್ಪಾಳೆ ತಟ್ಟಿದ್ದು, ನಾಚಿಕೆಗೇಡು. ಹಿಂದೆ ಪಾಕ್ ಪ್ರಧಾನಿ ನವಾಜ್ ಷರೀಪ್ನು ಅಂದಿನ ಪ್ರಧಾನಿ ಮನಮೋಹನ್ಸಿಂಗ್ ಬಗ್ಗೆ ಟೀಕೆ ಮಾಡಿದಾಗ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಸಿಂಗ್ ಜತೆಗೆ ನಿಂತ್ತಿದ್ದರು. ಅಭಿಪ್ರಾಯ ಭೇದ ನಮಗೆ ಇರಬಹುದು. ವಿದೇಶಿಗರ ಹಸ್ತಕ್ಷೇಪ ಸಹಿಸಲ್ಲ ಎಂದು ರಾಜನಾಥ್ಸಿಂಗ್ ಹೇಳಿದರು.
ಅಧಿಕಾರಕ್ಕೆ ಏರಲು ಕಾಂಗ್ರೆಸ್ ಕೀಳು ಮಟ್ಟಕ್ಕೆ ಇಳಿದಿದೆ. ಜನರಿಂದ ಆಯ್ಕೆಯಾದ 50 ಸರ್ಕಾರಗಳನ್ನು ಬೇಕಾಬಿಟ್ಟಿ ಕಿತ್ತೊಗೆದ ಇತಿಹಾಸ ಕಾಂಗ್ರೆಸ್ಗಿದೆ. ಜನಪರ, ಸರ್ಕಾರದ ವಿರುದ್ಧ ಇದ್ದ 16 ನ್ಯಾಯಮೂರ್ತಿಗಳನ್ನು ಒಂದೇ ದಿನ ವರ್ಗ ಮಾಡಿದ್ದು, ಇದೀಗ ಸಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟಿಸುತ್ತಿದ್ದಾರೆ. ದೇಶ ಬಲಿಷ್ಠ ಆರ್ಥಿಕ ಶಕ್ತಿಯಾಗುತ್ತಿದ್ದು, ಜನ ಕಾಂಗ್ರೆಸ್ನ ಷಡ್ಯಂತ್ರ ಅರಿಯಬೇಕು.
> ರಾಜನಾಥ್ಸಿಂಗ್, ರಕ್ಷಣಾ ಸಚಿವ
ಮದುವೆ ಆಗದೆ ಹುಚ್ಚು ಬಿಡಲ್ಲ. ಹುಚ್ಚು ಬಿಡದೆ ಮದುವೆ ಆಗಲ್ಲ. ರಾಹುಲ್ ಗಾಂಧಿಗೆ ಈ ಗಾದೆ ಮಾತು ಅನ್ವಯಿಸುತ್ತದೆ. ರಾಹುಲ್ ಎನ್ಆರ್ಐ ಆಗಿದ್ದು, ವಿದೇಶದಲ್ಲಿ ಭಾರತಕ್ಕೆ ಅಪಮಾನ ಮಾಡಿ, ದಂಗೆಗೆ ಷಡ್ಯಂತ್ರ ರೂಪಿಸಿದ್ದು, ಭಾರತೀಯರ ಹೃದಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಮಲ್ಲಿಕಾರ್ಜುನ ರ್ಖಗೆಗೆ ದೇಶದ ಜನರೇ ಹೇಳುತ್ತಿದ್ದಾರೆ "ಮೋದಿ ಕಹಿ ನಹೀ ಜಾಯೇಗಾ.
> ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ ಬಿಜೆಪಿ