ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಬಿಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಬಿಹಾರಿ ನೃತ್ಯ ಪ್ರದರ್ಶಿಸಿದರು.
- ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿಹಾರ ದಿನಾಚರಣೆ
ಕಲಬುರಗಿ: ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಒಂದು ಮಿನಿ ಭಾರತ. ನಾವು ಎಲ್ಲಾ ರಾಜ್ಯಗಳ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗೌರವಿಸುವುದರ ಜತೆಗೆ ಆಚರಿಸುತ್ತೇವೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಇತ್ತೀಚಿಗೆ ನಡೆದ ಬಿಹಾರ ದಿನಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತವು ವೈವಿಧ್ಯತೆಯಲ್ಲಿ ಏಕತೆಗೆ ಹೆಸರುವಾಸಿಯಾಗಿದೆ. ಶತಮಾನಗಳಿಂದ ನಾವು ವೈವಿಧ್ಯತೆ ಗೌರವಿಸಲಾಗುತ್ತಿದೆ. ಅದನ್ನು ಪೋಷಿಸಲಾಗಿದೆ. ಪ್ರತಿಯೊಂದು ರಾಜ್ಯ ವಿಶಿಷ್ಟವಾದದ್ದನ್ನು ತರುತ್ತದೆ. ಇಂತಹ ಉತ್ಸವಗಳು ಸಾಮರಸ್ಯ ತರುತ್ತವೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆ ಮಾಡುತ್ತವೆ. ನಾವೆಲ್ಲರೂ ಒಟ್ಟಾಗಿ ಕಲಿಯಲು ವಿವಿಯನ್ನು ಉತ್ತಮ ಸ್ಥಳವನ್ನಾಗಿ ಮಾಡೋಣ ಎಂದು ಹೇಳಿದರು
ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ಭೋಜ್‌ಪುರಿ, ಹಿಂದಿ ಮತ್ತು ತೆಲುಗು ಸಿನಿಮಾ ನಟ ಪಂಕಜ್ ಕೇಸರಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಾಂಸ್ಕೃತಿಕ ಗೋಷ್ಠಿಯಲ್ಲಿ ವಿವಿಧ ಪ್ರದರ್ಶನಗಳ ಮೂಲಕ ಬಿಹಾರದ ರೋಮಾಂಚಕ ಸಂಪ್ರದಾಯ ಪ್ರದರ್ಶಿಸಿಸಲಾಯಿತು. ಕಾರ್ಯಕ್ರಮವು ಜೈಭೈರವಿ ಮತ್ತು ಕೋಯೆಲ್ ಬಿನ್ ಬಾಗಿಯಾ ನಂತಹ ಗುಂಪು ಹಾಡುಗಳನ್ನು ಒಳಗೊಂಡಿತ್ತು, ಜಿಜಿಯಾ, ಕಜ್ರಿ ಮತ್ತು ಜಟ್-ಜತಿನ್‌ನಂತಹ ಸಾಂಪ್ರದಾಯಿಕ ನೃತ್ಯಗಳು ಮತ್ತು ವಿಶೇಷ ಛಾತ್ ಉತ್ಸವದ ಆಕ್ಟ್ ಪ್ರೇಕ್ಷಕರಿಂದ ಉತ್ಸಾಹಭರಿತ ಮೆಚ್ಚುಗೆ ಪಡೆಯಿತು. ಬಿಹಾರದ ಜಾನಪದ ಸಂಸ್ಕೃತಿಯ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಜಿಯಾ ಹೋ ಬಿಹಾರ್ ಕೆ ಲಾಲಾ ಮತ್ತು ಮಿಥಿಲಾ ಕೆ ಬೇಟಾ ಸೇರಿದಂತೆ ಏಕವ್ಯಕ್ತಿ, ಸಂಗೀತ ಪ್ರದರ್ಶನಗಳು, ಕವನ ವಾಚನ ಮತ್ತು ಶಕ್ತಿಯುತ ಗುಂಪು ನೃತ್ಯಗಳನ್ನು ಒಳಗೊಂಡಿತ್ತು.
ರಾಗಿಣಿ ರಾಜ್‌ಭೋರ್, ರಾಣಿಸಿಂಗ್, ಪಂಕಜ್ ಝಾ, ಪ್ರಜ್ಞಾ ಮಲ್ಲಿಕ್, ಮುರಾರಿ ಝಾ, ನಿತೀಶ್, ವಿವೇಕ್ ಮಿಶ್ರಾ, ಸಾಯಂಕಿತ್, ಸುಮಿತ್, ಸಂಕಲ್ಪ್, ಸ್ವಸ್ತಿಕ, ಗಣೇಶ್, ಓಂ ಪ್ರಕಾಶ್, ಪ್ರಿಯಾಂಶು, ನಾರಾಯಣ್, ಶಾಬು, ವೈಷ್ಣವ್, ಮದ್, ಶಬು, ವೈಷ್ಣವ್, ಮದ್, ವೈಷ್ಣವ್ ತಿವಾರಿ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಪ್ರದಾಯಿಕ ಬಿಹಾರಿ ಪಾಕಪದ್ಧತಿಯಾದ ಲಿಟ್ಟಿಚೋಖಾ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮವು ಸಾಂಸ್ಕೃತಿಕ ಸಾಮರಸ್ಯವನ್ನು ಯಶಸ್ವಿಯಾಗಿ ಬೆಳೆಸಿತು. ಬಿಹಾರದ ವೈವಿಧ್ಯಮಯ ಸಂಪ್ರದಾಯಗಳನ್ನು ಎತ್ತಿ ತೋರಿಸಿತು, ವಿಶ್ವವಿದ್ಯಾಲಯ ಸಮುದಾಯದೊಳಗಿನ ಏಕತೆಯ ಮನೋಭಾವ ಬಲಪಡಿಸಿತು.
ಸಂಚಾಲಕ ಪ್ರೊ.ಪ್ರಮೋದ್ ಕುಮಾರ್ ಸ್ವಾಗತಿಸಿದರು. ಸಹ-ಸಂಚಾಲಕ ಡಾ.ಪಿ.ಕುಮಾರ್ ಮಂಗಳA ಅತಿಥಿಗಳನ್ನು ಪರಿಚಯಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ವಿಭಿನ್ನ ಸಂಸ್ಕೃತಿ, ಕಲೆ ಕಾಣಬಹುದು. ಎಲ್ಲವನ್ನು ಎಲ್ಲರೂ ಗೌರವಿಸಬೇಕು, ಆ ಬಗ್ಗೆ ಉತ್ಸುಕತೆಯಿಂದ ಅರಿತುಕೊಳ್ಳಬೇಕು. ಆ ಮೂಲಕ ರಾಜ್ಯ, ರಾಜ್ಯಗಳಲ್ಲಿ ವಿದ್ಯಾರ್ಥಿಗಳ ನಡುವಿನ ಅಂತರ ಕಡಿಮೆಯಾಗಲಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಆಗಾಗ ಇಂತಹ ಉತ್ಸವ ಆಯೋಜಿಸುತ್ತಿದೆ.
ಪ್ರೊ.ಬಟ್ಟು ಸತ್ಯನಾರಾಯಣ,ಕುಲಪತಿ, ಸಿಯುಕೆ ಕಲಬುರಗಿ.