ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಸಿದ್ಧಸಿರಿ ಭವನ ಉದ್ಘಾಟನೆ ಸಮಾರಂಭದಲ್ಲಿ ಉತ್ತಮ ಗ್ರಾಹಕರನ್ನು ಸತ್ಕರಿಸಲಾಯಿತು. ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯ, ಬಸನಗೌಡ ಪಾಟೀಲ್​ ಯತ್ನಾಳ, ರಾಮನಗೌಡ ಪಾಟೀಲ್​, ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ ಇತರರಿದ್ದರು. 
ಕಲಬುರಗಿ

ರೈತರು, ಜನರ ಸಮಸ್ಯೆಗೆ ಯತ್ನಾಳ ಧ್ವನಿ

ಶಹಾಬಾದ್​: ಬಸನಗೌಡ ಪಾಟೀಲ್​ ಯತ್ನಾಳ ಅವರು ಈ ನೆಲ-ಜಲ ಹಾಗೂ ಸಂಸತಿಯ ರಾಯಭಾರಿಯಾಗಿದ್ದಾರೆ. ನಿತ್ಯವೂ ರೈತರು, ಜನರ ಸಮಸ್ಯೆಗೆ ಸ್ಪಂದಿಸಿ ಧ್ವನಿಯಾಗುತ್ತಾರೆ ಎಂದು ಮುಗಳನಾಗಾವಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರು ಹೇಳಿದರು.

ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಿದ್ಧಸಿರಿ ಮಲ್ಟಿ ಸ್ಟೇಟ್​, ಮಲ್ಟಿ ಪರ್ಪಸ್​ ಕೋ ಆಪರೇಟಿವ್​ ಸೊಸೈಟಿಯ ನೂತನ ಸಿದ್ದಸಿರಿ ಭವನ ಉದ್ಘಾಟನೆ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ವಿಜಯಪುರ ಶಾಸಕ, ಸಿದ್ಧಸಿರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸನಗೌಡ ಪಾಟೀಲ್​ ಯತ್ನಾಳ ಮಾತನಾಡಿ, ಸಿದ್ಧಸಿರಿ ಸಂಸ್ಥೆ ನಗರದಲ್ಲಿ ಪ್ರಾರಂಭವಾಗಿ 7 ವರ್ಷವಾಗಿದ್ದು, ಉತ್ತಮ ಶಾಖೆಗಳಲ್ಲಿ ಒಂದಾಗಿದೆ. ಬಡವರಿಗಾಗಿ 5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡುತ್ತಿದ್ದು, 50 ಲಕ್ಷ ರೂ. ಠೇವಣಿಗೆ ಮಾಸಿಕ 50 ಸಾವಿರ ರೂ. ಬಡ್ಡಿ ನೀಡಲಾಗುತ್ತಿದೆ. ಸಂಸ್ಥೆಯಿಂದ ಕಬ್ಬು, ಮೆಕ್ಕೆಜೋಳ, ಅಕ್ಕಿಯಿಂದ ಪ್ರತಿದಿನ 4.5 ಲಕ್ಷ ಲೀ. ಇಥೆನಾಲ್​ ಉತ್ಪಾದನೆ ಮಾಡಲಾಗುತ್ತಿದೆ ಎಂದರು.

ಚಿಂಚೋಳಿಯಲ್ಲಿ ಕಬ್ಬು ಕಟಾವು ಮಾಡಲು ಸ್ಥಳಿಯರಿಗೆ ತರಬೇತಿ ನೀಡಿ, ಪರರಾಜ್ಯದ ಕಾರ್ಮಿಕರ ಮೇಲಿನ ಅವಲಂಬನೆ ತಪ್ಪಿಸಲಾಗಿದೆ. ಸಂಸ್ಥೆ ಕೆಲಸಗಾರರಿಗೆ 10 ಲಕ್ಷ ರೂ. ಆರೋಗ್ಯ ವಿಮೆ ಮಾಡಿಸಿದ್ದು, 80 ಎಕರೆ ಪ್ರದೇಶದಲ್ಲಿ ಗೋ ಶಾಲೆ ನಡೆಸುತ್ತಿದ್ದು, 1500 ಗೋವುಗಳನ್ನು ಸಾಕಲಾಗುತ್ತಿದೆ. ಇದರ ಮೂಲಕ 35 ವಸ್ತುಗಳ ಉತ್ಪಾದನೆ ನಡೆಸಲಾಗುತ್ತಿದೆ. ಸಾಲ ಪಡೆದ ಗ್ರಾಹಕ ಮರಣಹೊಂದಿದ್ದಲ್ಲಿ 5 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಹೇಳಿದರು.

ಮಾಜಿ ಸಚಿವ ರೇವೂನಾಯಕ ಬೆಳಮಗಿ ಕಟ್ಟಡ ಉದ್ಘಾಟಿಸಿದರು. ಪ್ರಮುಖರಾದ ನರೇಂದ್ರ ವರ್ಮಾ, ಅಣವೀರ ಇಂಗಿನಶೆಟ್ಟಿ, ರಾಜು ಮೇಸಿ, ಪ್ರಭುಗೌಡ ದೇಸಾಯಿ, ಶಿವಾನಂದ ಅಣೆಪ್ಪನವರ, ಜಗದೀಶ ಕ್ಷತ್ರಿ, ಗಣಪತಿ ಜಾಧವ್​, ನಾಗರಾಜ ಮಳವಾಡ, ಆಕಾಶ ಗುತ್ತೇದಾರ್​ ಇತರರಿದ್ದರು.

ಉತ್ತಮ ಗ್ರಾಹಕರನ್ನು ಸತ್ಕರಿಸಲಾಯಿತು. ಪ್ರಭುಗೌಡ ದೇಸಾಯಿ ಸ್ವಾಗತಿಸಿದರು. ರಾಮನಗೌಡ ಪಾಟೀಲ್​ ಪ್ರಾಸ್ತಾವಿಕ ಮಾತನಾಡಿದರು. ಸಂಗೀತಾ ಮಠಪತಿ ನಿರೂಪಣೆ ಮಾಡಿದರು.