ಕಲಬುರಗಿ

ಕಲಬುರಗಿ ಜೈಲಿನಿಂದ ಪರಾರಿಯಾಗಿದ್ದ ಕೈದಿಗೆ ಗುಂಡೇಟು: ಇಬ್ಬರು ಪೊಲೀಸರಿಗೆ ಗಾಯ

ಕಲಬುರಗಿ: ನಗರದ ಕೇಂದ್ರ ಕಾರಾಗೃಹದಿಂದ (Kalaburagi Central Jail )ಪರಾರಿಯಾಗಿದ್ದ ಮೂವರು ಶಿಕ್ಷೆಗೊಳಗಾದ ಕೈದಿಗಳ ಪೈಕಿ ಒಬ್ಬನನ್ನು ಪೊಲೀಸರು ಬುಧವಾರ ಬೆಳಗ್ಗೆ ಪತ್ತೆಹಚ್ಚಿದ್ದು, ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆ‌ ದಾಳಿ ಮಾಡಿದ್ದರಿಂದ ಖಾಕಿಪಡೆವರು ಆತ್ಮರಕ್ಷಣೆಗಾಗಿ ಗುಂಡು( firing) ಹಾರಿಸಿದ್ದಾರೆ.
ಸಂತೋಷ ಮೇತ್ರೆ ಗುಂಡೇಟು ತಿಂದು ಗಾಯಗೊಂಡಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈತ (Bidar District) ಔರಾದ ತಾಲೂಕಿನ ಸಂತಪುರ ಗ್ರಾಮದವ. ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದ.
ಈ ಕುರಿತು ನಗರ ಪೊಲೀಸ್ ಆಯುಕ್ತ ( City Police Commissioner ) ಶರಣಪ್ಪ ಎಸ್.ಡಿ. (Dr.Sharanappa .S.D) ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಜೈಲಿನಿಂದ ಮೂವರು ಶಿಕ್ಷಿತ ಕೈದಿಗಳು ಪರಾರಿಯಾದ ಪ್ರಕರಣ ದಾಖಲಿಸಿಕೊಂಡ ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು ಎಂದು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಹುಮನಾಬಾದ್ ರಿಂಗ್ ರಸ್ತೆಯ ಕಪನೂರ ಕೈಗಾರಿಕಾ ಪ್ರದೇಶದ( Kapanur Industrial Area) ಬಳಿ ಪರಾರಿಯಾಗಿದ್ದ ಒಬ್ಬ ಕೈದಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ತೆರಳಿದ ವಿಶೇಷ ತಂಡದವರು ಕೈದಿಯನ್ನು ಪತ್ತೆ ಹಚ್ಚಿ ಶರಣಾಗುವಂತೆ ಸೂಚಿಸಿದರೂ, ಪೊಲೀಸರ ಮೇಲೆ‌ ಎರಗಿ ಬಿದ್ದಿದ್ದಾನೆ.
ಆದರೆ, ಶರಣಾಗಲು ನಿರಾಕರಿಸಿದ ಕೈದಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದು, ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹಾಗೂ ಆತ್ಮರಕ್ಷಣೆಗಾಗಿ ಪೊಲೀಸರು (Shoot out) ಗುಂಡು (Bullet) ಹಾರಿಸಿದ್ದು, ಕೈದಿಯ ಬಲ ಕಾಲಿಗೆ ಗುಂಡು ತಗುಲಿದೆ.
ಗಾಯಗೊಂಡ ಇಬ್ಬರು ಪೊಲೀಸ್ (Police Constable) ಸಿಬ್ಬಂದಿ ಹಾಗೂ ಗಾಯಗೊಂಡ ಕೈದಿಯನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ (Gims) ದಾಖಲಿಸಲಾಗಿದ್ದು, ಮೂವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಇದೇ ವೇಳೆ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಕೈದಿ ವಿರುದ್ಧ ಮತ್ತೊಂದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಜುಲೈ 13ರ ಮಧ್ಯರಾತ್ರಿ ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಶಿಕ್ಷಿತ ಕೈದಿಗಳು ಜೈಲಿನ ಭದ್ರತಾ ಗೋಡೆ ಹಾರಿ ಪರಾರಿಯಾಗಿದ್ದರು. ಈ ಘಟನೆ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಉಳಿದ ಇಬ್ಬರು ಪರಾರಿಯಾಗಿರುವ ಕೈದಿಗಳ ಪತ್ತೆಗಾಗಿ ವಿಶೇಷ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.