ಅಫಜಲಪುರ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಎರಡನೇ ದಿನದ ಪಾದಯಾತ್ರೆಯಲ್ಲಿ ಶ್ರೀಮಂತ ಬಿರಾದಾರ, ರಮೇಶ ಪಾಟೀಲ್​, ರಮೇಶ ಶೆಟ್ಟಿ, ಭೀಮರಾವ ಗೌರ ಇತರರಿದ್ದರು. 
ಕಲಬುರಗಿ

ಕಾವೇರಿಗಿದ್ದ ಕಾಳಜಿ ಭೀಮೆಗೆ ಏಕಿಲ್ಲ?

ಅಫಜಲಪುರ: ನಮ್ಮ ಪಾಲಿನ 15 ಟಿಎಂಸಿ ನೀರಿಗಾಗಿ ತಾಲೂಕು ಶಾಶ್ವತ ನೀರಾವರಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಭೀಮೆಯ ರೈತರ ಧ್ವನಿ ಪಾದಯಾತ್ರೆ ಗುರುವಾರ ಅತನೂರದಿಂದ ಬಾದನಳ್ಳಿ, ಚೌಡಾಪುರ, ತಾಂಡಾ ಮೂಲಕ ರಾತ್ರಿ ಹಡಗಿಲ-ಹಾರುತಿ ತಲುಪಿ ವಾಸ್ತವ್ಯ ಮಾಡಿತು.

ಹಿರಿಯ ಹೋರಾಟಗಾರ ಶ್ರೀಮಂತ ಬಿರಾದಾರ ಮಾತನಾಡಿ, ಐದು ದಶಕ ಹಿಂದೆಯೇ ಮಹಾರಾಷ್ಟ್ರದಿಂದ ನಮಗೆ ಹಕ್ಕಿನ ನೀರು ಸಿಗಬೇಕಿತ್ತು. ತಡವಾಗಿದ್ದರೂ ಆರಂಭಿಸಿರುವ ಹೋರಾಟದಲ್ಲಿ ಪ್ರತಿ ಗ್ರಾಮದ ಅನ್ನದಾತರು ಪಾಲ್ಗೊಳ್ಳುತ್ತಿರುವುದು ಚೈತನ್ಯ ನೀಡಿದೆ. ರಾಜ್ಯ ಸರ್ಕಾರ ಕಾವೇರಿ ನದಿಗೆ ತೋರುವ ಕಾಳಜಿ ಭೀಮೆಗೆ ತೋರುತ್ತಿಲ್ಲ ಏಕೆ? ಮುಖ್ಯಮಂತ್ರಿಗಳು ಮಲತಾಯಿ ಧೋರಣೆ ತೋರದೆ ಶೀಘ್ರದಲ್ಲೇ ಮಧ್ಯಪ್ರವೇಶಿಸಿ ನ್ಯಾಯಯುತ ಹಕ್ಕಿಗೆ ಧ್ವನಿ ಎತ್ತಿ ಹಕ್ಕಿನ ನೀರು ಹರಿಸುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ರಮೇಶ ಪಾಟೀಲ್​ ಮಾತನಾಡಿ, ಭೀಮೆಯ ಎಡ ಮತ್ತು ಬಲದಂಡೆ ರೈತರು ತಮ್ಮ ಗ್ರಾಮಗಳಲ್ಲಿ ಪಾದಯಾತ್ರೆಗೆ ತನು ಮನ ಧನದಿಂದ ಕೈಜೋಡಿಸುತ್ತಿದ್ದು, ಹೋರಾಟದ ಕಿಚ್ಚು ಚಿರಸ್ಥಾಯಿಯಾಗಿರಲಿದೆ ಎಂದು ಹೇಳಿದರು.

ಇಂದಿನ ಪಾದಯಾತ್ರೆಯಲ್ಲಿ ರಮೇಶ ಶೆಟ್ಟಿ, ಚಿದಾನಂದ ಮಠ, ಭೀಮರಾಯ ಗೌರ, ರಮೇಶ ಬಾಕೆ, ಸುಭಾಷ ರಾಠೋಡ, ಯಶವಂತ ಪಟ್ಟಿದಾರ, ಗುರು ಚಾಂದಕವಟೆ, ಮುರುಗೇಂದ್ರ ಮಸಳಿ, ಸಿದ್ದು ದೇವತ್ಕಲ್​, ಬಸವರಾಜ ಮಂಗಳೂರ, ಚಂದು ಬನ್ನೆಟ್ಟಿ, ಶರಣಗೌಡ ಪಾಟೀಲ್​, ಭೀಮನಗೌಡ ನಾರಸೆರ, ಪ್ರಭಾವತಿ ಮೇತ್ರಿ, ನೂರ್​ ಅಹ್ಮದ್​ ಭಾಗವಾನ್​, ಅರ್ಜುನ ಸೋಮಜಾಳ, ಕಲ್ಲಪ್ಪ ಅಂಜುಟಗಿ, ಬಿ.ಎಂ. ರಾವ್​, ಈರಪ್ಪ ತೇಲಿ, ಬಸವರಾಜ ಕಲಶೆಟ್ಟಿ ಇತರರಿದ್ದರು.

ಇಂದು ಡಿಸಿಗೆ ಮನವಿ

ಶುಕ್ರವಾರ ಬೆಳಗ್ಗೆ ಹಡಗಿಲ-ಹಾರುತಿಯಿಂದ ಶುರುವಾಗುವ ಪಾದಯಾತ್ರೆ ಶರಣಸಿರಸಗಿ, ಹೈಕೋರ್ಟ್​, ಹೀರಾಪುರ ಕ್ರಾಸ್​, ಕಣ್ಣಿ ಮಾರ್ಕೆಟ್​, ಕೇಂದ್ರ ಬಸ್​ ನಿಲ್ದಾಣ, ಜೇವರ್ಗಿ ಕ್ರಾಸ್​ ಹಾಗೂ ಎಸ್​ವಿಪಿ ಸರ್ಕಲ್​ ಮೂಲಕ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದ ಬಳಿಕ ಹೋರಾಟಗಾರರು ಜಿಲ್ಲಾಡಳಿತಕ್ಕೆ ಮನವಿಪತ್ರ ಸಲ್ಲಿಸಲಿದ್ದಾರೆ.