ಹರವಾಳ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ&ಬಾಂದಾರ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್​ ಪರಿಶೀಲಿಸಿದರು. ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ ಇತರರಿದ್ದರು.  
ಕಲಬುರಗಿ

ನೀರಿನ ಸಂಗ್ರಹ, ಸಂಪರ್ಕ ವ್ಯವಸ್ಥೆಗೆ ಸಿಗಲಿದೆ ಬಲ

ಜೇವರ್ಗಿ: ಹರವಾಳ ಸಮೀಪ ಭೀಮಾ ನದಿಗೆ ಅಡ್ಡಲಾಗಿ ಸುಮಾರು 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆ ಬಾಂದಾರ ಯೋಜನೆ ಕಾಮಗಾರಿಯನ್ನು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ ಧರ್ಮಸಿಂಗ್​ ಗುರುವಾರ ಪರಿಶೀಲಿಸಿದರು.

ಯೋಜನೆಯ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. 368.60 ಮೀ. ಉದ್ದ ಹಾಗೂ 4 ಮೀ. ಎತ್ತರದ ಸೇತುವೆ ಬಾಂದಾರವು ನೀರಿನ ಸಂಗ್ರಹಣಾ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಸುಧಾರಿಸಲು ಹಾಗೂ ಹರವಾಳ ಸೇರಿ ಸುತ್ತಮುತ್ತಲಿನ ಗ್ರಾಮಗಳ ಸಂಪರ್ಕ ವ್ಯವಸ್ಥೆ ಬಲಪಡಿಸಲು ನೆರವಾಗಲಿದೆ ಎಂದು ಹೇಳಿದರು.

ನೀರಾವರಿ ಯೋಜನೆಗಳು ಕೇವಲ ನೀರು ಸಂಗ್ರಹಿಸುವ ಕಾಮಗಾರಿಗಳಾಗಿರಬಾರದು. ಕೃಷಿ, ಗ್ರಾಮೀಣ ಸಂಪರ್ಕ ಮತ್ತು ಸ್ಥಳಿಯ ಆರ್ಥಿಕ ಚಟುವಟಿಕೆಗಳಿಗೆ ಪ್ರಯೋಜನ ನೀಡಬೇಕು. ಹರವಾಳ ಸೇತುವೆ ಯೋಜನೆಯಿಂದ ಈ ಭಾಗದ ರೈತರು ಹಾಗೂ ಗ್ರಾಮಸ್ಥರಿಗೆ ದೀರ್ಕಾಲಿಕ ಪ್ರಯೋಜನ ದೊರೆಯಲಿದೆ. ಜೇವರ್ಗಿ ಹಾಗೂ ಅಫಜಲಪುರ ಭಾಗಗಳಲ್ಲಿ ನೀರಾವರಿ, ಸಂಪರ್ಕ ವ್ಯವಸ್ಥೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಸಮಾನ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯಗಳನ್ನು ಸ್ಥಳದಲ್ಲೆ ಅರಿತು, ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದರು.

ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ರುಕುಂ ಪಟೇಲ್​ ಇಜೇರಿ, ಪ್ರಮುಖರಾದ ರಾಜಶೇಖರ ಸೀರಿ, ಕಾಶಿರಾಯಗೌಡ ಯಲಗೋಡ, ವಿಜಯಕುಮಾರ ಹಿರೇಮಠ, ಶಿವಣ್ಣಗೌಡ ಮಂದ್ರವಾಡ, ವಸಂತ ನರಿಬೋಳ, ಮಹಿಮೂದ್​ ನೂರಿ, ಮಲ್ಲಿಕಾರ್ಜುನ ಬೂದಿಹಾಳ, ಶಿವಶರಣಪ್ಪ ಜೊಗೂರ, ಮಲ್ಲನಗೌಡ ಹರವಾಳ, ನಾಗರಾಜ ವಿಟಿ ಇತರರಿದ್ದರು.