ಸೇಡಂ: ನಾವು ಸದಾ ಭಕ್ತಿ ಮಾರ್ಗದಲ್ಲಿ ನಡೆದು ಪರಮಾತ್ಮನ ಸ್ಮರಣೆ ಮಾಡಿದರೆ ಜೀವನದಲ್ಲಿ ಸಕಲವೂ ಸಾಧ್ಯವಾಗಲಿದೆ ಎಂದು ಶ್ರೀಶೈಲ ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ನುಡಿದರು.
ಶ್ರೀ ಸಪ್ಪಣಾರ್ಯ ಶಿವಯೋಗಿಗಳ 109ನೇ ಪುಣ್ಯಸ್ಮರಣೆ ನಿಮಿತ್ತ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ಹೇಮರಡ್ಡಿ ಮಲ್ಲಮ್ಮ ಚರಿತಾಮೃತ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಭಕ್ತಿಗೆ ಇನ್ನೊಂದು ಹೆಸರೇ ಹೇಮರಡ್ಡಿ ಮಲ್ಲಮ್ಮ. ಅವಳಲ್ಲಿನ ಶ್ರೇಷ್ಠತೆ ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಸಮಾಜ ಮುಖ್ಯ ಎಂಬ ಸಂಕಲ್ಪದೊಂದಿಗೆ ಸೇಡಂ ಸ್ವಾಮೀಜಿ ಭಕ್ತರ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದರು.
ಕೊತ್ತಲ ಬಸವೇಶ್ವರ ದೇವಾಲಯ ಪಂಚ ಕಮಿಟಿ ಕಾರ್ಯದರ್ಶಿ ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಶರಣೆ ಹೇಮರಡ್ಡಿ ಮಲ್ಲಮ್ಮನ ತತ್ವ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಬೇಕು ಎಂದು ಸಲಹೆ ನೀಡಿದರು.
ಟೆಂಗಳಿ-&ಮಂಗಲಗಿ ಶ್ರೀ ಶಾಂತಸೋಮನಾಥ ಶಿವಾಚಾರ್ಯ, ಚಿಟಗುಪ್ಪದ ಶ್ರೀ ಮರಳುಸಿದ್ಧ ಶಿವಾಚಾರ್ಯ, ಹಾಲಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು.
ಸೇಡಂನ ಶ್ರೀ ಶಿವಶಂಕರ ಶಿವಾಚಾರ್ಯ, ತೊಟ್ನಳ್ಳಿಯ ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಜಾಕನಪಲ್ಲಿಯ ಶ್ರೀ ಅಭಿನವ ಗವಿಸಿದ್ಧಲಿಂಗ ಶಿವಾಚಾರ್ಯ, ಮಳಖೇಡದ ಶ್ರೀ ಕೊಟ್ಟುರೇಶ್ವರ ಶಿವಾಚಾರ್ಯ, ಗುಂಡೇಪಲ್ಲಿಯ ಶ್ರೀ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ, ಶ್ರೀ ಶಂಕ್ರಯ್ಯ ಸ್ವಾಮೀಜಿ ಇತರರಿದ್ದರು.
ನೂಲದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯ ಪ್ರವಚನ ನಡೆಸಿಕೊಟ್ಟರು. ಶಾಂತಾನಂದ ಗವಾಯಿ ಸಂಗೀತ ಸೇವೆ ನೀಡಿದರು. ಮಹೇಶ ಗುನ್ನಾಳ ತಬಲಾ ಸಾಥ್ ನೀಡಿದರು. ವೀರೇಶ ಹೂಗಾರ ನಿರೂಪಣೆ ಮಾಡಿ ವಂದಿಸಿದರು. ಶ್ರಾವಣದಲ್ಲಿ ನಡೆದ ಮಾನವನ ಬದುಕಿನ ಸೋಪಾನ ಶ್ರಾವಣ ಸತ್ಸಂಗದ ದಾಸೋಹಿಗಳನ್ನು ಸತ್ಕರಿಸಲಾಯಿತು.
ಅನನ್ಯ ಚಿತ್ತದಿಂದ ಆರಾಧಿಸುವವರ ಯೋಗಕ್ಷೇಮ ಭಗವಂತನೇ ನೋಡಿಕೊಳ್ಳುತ್ತಾನೆ. ಯೋಗ ಎಂದರೆ ಇಲ್ಲದಿರುವುದನ್ನು ದೊರಕಿಸಿಕೊಡುವುದು. ಕ್ಷೇಮ ಎಂದರೆ ದೊರೆತಿರುವುದನ್ನು ಕಾಪಾಡುವುದು. ಭಕ್ತನು ಭಗವಂತನಲ್ಲಿ ಸಂಪೂರ್ಣ ವಿಶ್ವಾಸವಿಟ್ಟು ಶರಣಾದಾಗ ಜೀವನದಲ್ಲಿ ಮುನ್ನಡೆಯಲು ಆಧ್ಯಾತ್ಮಿಕ ಶಕ್ತಿ, ಧೈರ್ಯ ಸಿಗುತ್ತದೆ.> ಜಗದ್ಗುರು ಶ್ರೀ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಶೈಲ ಪೀಠ